ಹೊಸದಿಗಂತ ವರದಿ,ಯಲ್ಲಾಪುರ:
ಪಟ್ಟಣದ ಗಾಂ ಕುಟೀರದಲ್ಲಿ ಆಯೋಜಿಸಲಾದ ೩೮ನೇ ವರ್ಷದ ಸಂಕಲ್ಪ ಉತ್ಸವವನ್ನು ಶುಕ್ರವಾರ ಸಂಜೆ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಹೊಸದಿಗಂತ ದಿನಪತ್ರಿಕೆಯ ಸಮೂಹ ಸಂಪಾದಕ ವಿನಾಯಕ ಭಟ್ ಮುರೂರು, ಉದ್ಯಮಿ ಡಿ.ಶಂಕರ ಭಟ್ ಹಾಗೂ ಕಲಾ ಪ್ರೋತ್ಸಾಹಕ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿನಾಯಕ ಭಟ್ ಮೂರೂರು, ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ. ಪ್ರಶಸ್ತಿ ಪಡೆಯುವಂತಹ ಸಾಧನೆಯನ್ನು ಮಾಡಿದ್ದೇನೆ ಎನ್ನುವ ಭಾವನೆ ನನಗಿಲ್ಲ. ಜನಸೇವೆಗೆ ರಾಜಕೀಯವೇ ಬೇಕಾಗಿಲ್ಲ ಎಂಬುದಕ್ಕೆ ಸಂಕಲ್ಪ ಸೇವಾ ಸಂಸ್ಥೆಯ ಮೂಲಕ ಪ್ರಮೋದ್ ಹೆಗಡೆ ಅವರು ಸಾಕ್ಷಿಯಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಮಾತನಾಡಿ, ವಿವಿಧ ಕ್ಷೇತ್ರದ ಹಿರಿಕರ ಒಕ್ಕೂಟದ ಈ ಉತ್ಸವದಲ್ಲಿ ನಾನೂ ಸಹ ಒಂದು ಭಾಗವಾಗಿರುವುದು ಸಂತಸದ ವಿಷಯವಾಗಿದೆ. ಯಾವುದೇ ಕ್ಷೇತ್ರ ಉಳಿಯಬೇಕಾದರೆ ಅದನ್ನು ತಮ್ಮನ್ನು ತೊಡಗಿಸಿಕೊಳ್ಳುವ ಮನಸ್ಥಿತಿ ಉಳ್ಳವರು ಬೇಕು. ಅಂತವರನ್ನು ಪ್ರೋತ್ಸಾಹಿಸುವ ಕಾರ್ಯ ಸಂಕಲ್ಪ ಉತ್ಸವ ಮಾಡುತ್ತಿದೆ ಎಂದರು.
ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿ, ಧರ್ಮದ ಉಳಿವಿಗೆ ಸಾಂಸ್ಕೃತಿಕ, ಸಾಹಿತ್ಯಿಕ ಕಲೆಗಳು ಪ್ರಮುಖ ಪಾತ್ರ ವಹಿಸಿದೆ. ಇಂತಹ ಕಾರ್ಯಕ್ರಮಗಳಿಂದ ಸ್ಥಾನಿಕ ಕಲೆಗಳು ಗಟ್ಟಿಯಾಗಿ ಬೇರೂರಿದೆ ಎಂದು ಹೇಳಿದರು.
ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಸುಬ್ರಹ್ಮಣ್ಯ ಭಟ್, ನಗರ ಸೀಮಾ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ಹಿರಿಯರಾದ ಪಿ.ಜಿ.ಭಟ್ ಬರಗದ್ದೆ ಉಪಸ್ಥಿತರಿದ್ದರು.
ಸಂಕಲ್ಪ ಸೇವಾ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಲಾ ಭಟ್ ನಿರ್ವಹಿಸಿದರು. ರವಿ ಭಟ್ ಬರಗದ್ದೆ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಮಾಗಧವಧೆ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು.