ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ ನಡೆಸಿದೆ. ಮೆಟುಲಾ ಮತ್ತು ಹೈಫಾ ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಏಳು ಸಜನ್ರು ಸಾವನ್ನಪ್ಪಿದ್ದಾರೆ.
ಇದು ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಗುರಿಯಾಗಿಸಿಕೊಂಡ ದಾಳಿಯಲ್ಲಿ ಒಂದಾಗಿದ್ದು, ನಾಗರಿಕರು ಬಲಿಯಾಗಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಗುರುವಾರ ಬೆಳಗ್ಗೆ ಗಡಿ ಪಟ್ಟಣವಾದ ಮೆಟುಲಾ ಬಳಿ ಈ ರಾಕೆಟ್ ದಾಳಿ ನಡೆದಿದೆ. ಲೆಬನಾನ್‌ನಿಂದ ಹಾರಿಸಲಾದ ರಾಕೆಟ್ ಇಸ್ರೇಲ್ನ ಸೇಬಿನ ತೋಟಕ್ಕೆ ಅಪ್ಪಳಿಸಿದೆ ಪರಿಣಾಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಇದಾಗಿ ಕೆಲವು ಗಂಟೆಗಳ ನಂತರ ಹೈಫಾ ಉಪನಗರವಾದ ಕಿರಿಯಾತ್ ಅಟಾದ ಹೊರಗಿನ ಆಲಿವ್ ತೋಪಿನ ಮೇಲೆ ದಾಳಿ ನಡೆದಿದೆ. ಈ ಘಟನೆಯಲ್ಲಿ ಮತ್ತಿಬ್ಬರು ಕೊಲ್ಲಲ್ಪಟ್ಟಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆ ಕೂಡ ತನ್ನ ಹೇಳಿಕೆಯಲ್ಲಿ ಹಿಜ್ಬುಲ್ಲಾ ದಾಳಿಯನ್ನು ದೃಢಪಡಿಸಿದೆ. X ನಲ್ಲಿ ಪೋಸ್ಟ್ ಹಂಚಿಕೊಂಡಿರುವ IDF, ಹಿಜ್ಬುಲ್ಲಾ ರಾಕೆಟ್ಗಳು ಇಸ್ರೇಲ್ನಲ್ಲಿ 7 ಮುಗ್ಧ ನಾಗರಿಕರನ್ನು ಬಲಿ ಪಡೆದುಕೊಂಡಿವೆ. ನಾವು ಹಿಜ್ಬುಲ್ಲಾದ ಮಾರಣಾಂತಿಕ ದಾಳಿಗಳಿಗೆ ಉತ್ತರಿಸದೇ ಬಿಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.
ಮೃತಪಟ್ಟವರೆಲ್ಲರೂ ರಾಕೆಟ್ ದಾಳಿ ವೇಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಒಬ್ಬರು ಇಸ್ರೇಲಿ ಪ್ರಜೆಯಾಗಿದ್ದರೆ, ಇತರರು ವಿದೇಶಿ ಪ್ರಜೆಗಳು ಎಂದು ತಿಳಿದು ಬಂದಿದೆ. ಏತನ್ಮಧ್ಯೆ, ಗುರುವಾರ ಇಸ್ರೇಲ್ ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯಗಳು ಮತ್ತು ಕಮಾಂಡ್ ಸೆಂಟರ್‌ಗಳನ್ನು ಗುರಿಯಾಗಿಟ್ಟುಕೊಂಡು ಹೆಜ್ಬುಲ್ಲಾದ ರಾದ್ವಾನ್ ಪಡೆಗಳು ದಾಳಿ ನಡೆಸಿವೆ.
ಇರಾನ್‌ನಿಂದ ಸಿರಿಯಾ ಮೂಲಕ ಲೆಬನಾನ್‌ಗೆ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಕಾರಣವಾದ ಹೆಜ್ಬುಲ್ಲಾ ಘಟಕದ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಶಸ್ತ್ರಾಸ್ತ್ರ ಸಂಗ್ರಹಾಗಾರ ಮೇಲೆ ದಾಳಿ ಆರಂಭಿಸಲಾಗಿದೆ ಎಂದು IDF ಹೇಳಿದೆ. ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯಗಳ ಮೇಲಿನ ದಾಳಿಯು ಯುನಿಟ್ 4400 ರ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ.