Thursday, June 1, 2023

Latest Posts

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮಾಜಿ ಶಾಸಕ ಸಹಿತ ಮೂವರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದಿದ್ದು , ಭಾರಿ ಹಿಂಸಾಚಾರಕ್ಕೆ ಹಲವು ಮನೆಗಳು ಬೆಂಕಿಗೆ ಆಹುತಿಯಾಗಿದೆ.

ಕಳೆದೊಂದು ತಿಂಗಳಿನಿಂದ ಮಣಿಪುರ ಪ್ರಕ್ಷ್ಯುಬ್ದಗೊಂಡಿದೆ. ಹಲವು ಹಿಂಸಾಚಾರ ಘಟನೆ ನಡೆದಿದೆ. ಬಳಿಕ ಸೇನೆ ನಿಯೋಜಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿತ್ತು. ಇದೀಗ ಬುಡಕಟ್ಟು ಸಮುದಾಯ ಹಾಗೂ ಇತರರ ನಡುವಿನ ಗಲಭೆ ಮತ್ತೊಂದು ಹಿಂಸಾಚಾರಕ್ಕೆ ನಾಂದಿ ಹಾಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಭಾರತೀಯ ಸೇನೆಯನ್ನು ನಿಯೋಜಿಸಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮಧ್ಯಾಹ್ನ ರಾಜಧಾನಿ ಇಂಫಾಲ್‌ನ ಚೆಕ್‌ಕಾನ್‌ ಪ್ರದೇಶದಲ್ಲಿ ಮೇಟಿ ಹಾಗೂ ಕುಕಿ ಸಮುದಾಯಗಳ ನಡುವೆ ಮಾರುಕಟ್ಟೆಯ ಜಾಗಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆಯಿತು. ಈ ವೇಳೆ ಅಲ್ಲಲ್ಲಿ ಬೆಂಕಿ ಹಚ್ಚಿದ ಪ್ರಕರಣಗಳೂ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಸೇನೆಯನ್ನು ಗಸ್ತಿಗೆ ಮರು ನಿಯೋಜನೆ ಮಾಡಲಾಗಿದ್ದು, ಮಧ್ಯಾಹ್ನ 1ರ ನಂತರ ಮತ್ತೆ ಕರ್ಫ್ಯೂ ಹೇರಲಾಗಿದೆ.

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (N Biren Singh)ಬೆಳವಣಿಗೆಗಳನ್ನು ದೃಢಪಡಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಹಿಂಸಾಚಾರದಲ್ಲಿ ಭಾಗಿಯಾದ ಆರೋಪದ ಮೇಲೆ ಮಾಜಿ ಶಾಸಕ ಸೇರಿದಂತೆ ಮೂವರನ್ನು ಸೋಮವಾರ ಬಂಧಿಸಲಾಗಿದೆ. ಮಾಜಿ ಶಾಸಕರನ್ನು ಚುರಾಚಂದಪುರ ಜಿಲ್ಲೆಯ ಹೆಂಗ್ಲೆಪ್ ಕ್ಷೇತ್ರದ ಟಿ ತಂಗಜಲಂ ಹಾಕಿಪ್ ಎಂದು ಗುರುತಿಸಲಾಗಿದೆ.

ಭಾನುವಾರ ರಾತ್ರಿ, ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಸಿದ ಡಬಲ್ ಬ್ಯಾರೆಲ್ ಗನ್‌ಗಳೊಂದಿಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಿಂಗ್ ಹೇಳಿದರು.

ಸೋಮವಾರ ಇಂಫಾಲ್ ನಗರದ ನ್ಯೂ ಲಂಬುಲೇನ್ ಭಾಗದಲ್ಲಿ ಮತ್ತೊಂದು ಸಣ್ಣ ಘಟನೆ ನಡೆದಿದೆ. ಮಾಜಿ ಶಾಸಕರೊಬ್ಬರು ಈ ಷಡ್ಯಂತ್ರದಲ್ಲಿ ಭಾಗಿಯಾಗಿರುವುದು ಅತ್ಯಂತ ದುರದೃಷ್ಟಕರ. ಸಿಂಗಲ್ ಬ್ಯಾರೆಲ್ ಬಂದೂಕುಗಳನ್ನು ಹೊತ್ತ ಇಬ್ಬರು ಶಸ್ತ್ರಸಜ್ಜಿತ ಸಿಬ್ಬಂದಿ, ಮಾರಾಟಗಾರರನ್ನು ಬೆದರಿಸಿ ಪ್ರದೇಶವನ್ನು ಖಾಲಿ ಮಾಡುವಂತೆ ಕೇಳಿಕೊಂಡರು. ಮಾಜಿ ಶಾಸಕರ ಜೊತೆಗೆ ಈ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ,.

ರಾಜ್ಯದ ಜನರು ಶಾಂತವಾಗಿರಿ. ಶೀಘ್ರದಲ್ಲೇ ಶಾಂತಿ ಮತ್ತು ಸಹಜತೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಿ ಎಂದು ಸಿಎಂ ಸಿಂಗ್ ಮನವಿ ಮಾಡಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!