ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಾಂಪ್ಟನ್‌ನ ಹಿಂದು ಸಭಾ ಮಂದಿರದಲ್ಲಿ ನಡೆದ ಪ್ರತಿಭಟನೆಯ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೆನಡಾ ಪೊಲೀಸರು ಮತ್ತೋರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ .
ಪೀಲ್ ಪ್ರಾದೇಶಿಕ ಪೊಲೀಸರ ಹೇಳಿಕೆಯ ಪ್ರಕಾರ, ಕ್ರಿಮಿನಲ್ ಇನ್ವೆಸ್ಟಿಗೇಶನ್ಸ್ ಬ್ಯೂರೋದ ತನಿಖಾಧಿಕಾರಿಗಳು ಬ್ರಾಂಪ್ಟನ್‌ನ ದೇವಸ್ಥಾನದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 35 ವರ್ಷದ ಇಂದರ್‌ಜೀತ್ ಗೋಸಲ್ ಎಂಬಾತನನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಈತ ಕೆನಡಾದಲ್ಲಿ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆಯ ಸಂಯೋಜಕನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 6 ರಂದು ಟೊರೊಂಟೊದ 57 ವರ್ಷದ ರಣೇಂದ್ರ ಲಾಲ್ ಬ್ಯಾನರ್ಜಿ ಅವರನ್ನು ಬಂಧಿಸಲಾಯಿತು ಮತ್ತು ಅವರ ವಿರುದ್ಧ ಕೆನಡಾದ ಕ್ರಿಮಿನಲ್ ಕೋಡ್ ಸೆಕ್ಷನ್ 319 (1) ಗೆ ವ್ಯತಿರಿಕ್ತವಾಗಿ ದ್ವೇಷವನ್ನು ಸಾರ್ವಜನಿಕವಾಗಿ ಪ್ರಚೋದಿಸಿದ ಆರೋಪವನ್ನು ಹೊರಿಸಲಾಯಿತು. ಬಳಿಕ ಷರತ್ತುಗಳೊಂದಿಗೆ ಬಿಡುಗಡೆ ಮಾಡಲಾಯಿತು.
ನವೆಂಬರ್ 3ರಂದು ಖಾಲಿಸ್ತಾನ ಧ್ವಜಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದುಸಭಾ ದೇವಾಲಯದ ಆವರಣದೊಳಗೆ ನುಗ್ಗಿ, ಅಲ್ಲಿನ ಜನರೊಂದಿಗೆ ಘರ್ಷಣೆ ನಡೆಸಿದ್ದರು. ಇದನ್ನು ಭಾರತದ ಹೈಕಮಿಷನ್ ಮತ್ತು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿತ್ತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ವಿಎಚ್‌ಪಿ, ಬಿಜೆಪಿ, ಕಾಂಗ್ರೆಸ್ ನಾಯಕರೂ ಖಂಡಿಸಿದ್ದರು.