ವೀರ ಬಾಲ ದಿನ- ಆ ಪುಟಾಣಿಗಳು ಇಸ್ಲಾಂ ಮತಾಂತರದೆದುರು ಮರಣವನ್ನೇ ಆರಿಸಿಕೊಂಡರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದಂತೆ ಡಿಸೆಂಬರ್‌ 26 (ಇಂದು)ʼವೀರ ಬಾಲ ದಿನʼ ವನ್ನಾಗಿ ಆಚರಿಸಲಾಗುತ್ತಿದೆ. ದಾಳಿಕೋರ ಔರಂಗಜೇಬ ಹಾಕಿದ ಜೀವ ಬೆದರಿಕೆಗೂ ಬಗ್ಗದೇ ಪ್ರಾಣಾರ್ಪಣೆ ಮಾಡಿದ ಪುಟ್ಟ ಬಾಲಕರಿಬ್ಬರ ತ್ಯಾಗದ, ಬಲಿದಾನದ, ಧೈರ್ಯದ ಸ್ಮರಣೆಗೆಂದೇ ಈ ಆಚರಣೆ. ಈ ಹಿನ್ನೆಲೆಯಲ್ಲಿ ʼವೀರ ಬಾಲ ದಿನʼದ ಹಿನ್ನೆಲೆಯ ಕುರಿತು ನೀವು ತಿಳಿದುಕೊಳ್ಳಬೇಕಿರೋ ಮಾಹಿತಿ ಇಲ್ಲಿದೆ.

ಗುರುಗೋವಿಂದ ಸಿಂಗರ ಕಿರಿಯ ಪುತ್ರರಾದ ಫತೇಸಿಂಗ್‌ ಮತ್ತು ಜೋರಾವರ್‌ ಸಿಂಗ್.‌ ವೀರಮರಣವನ್ನಪ್ಪುವ ಹೊತ್ತಿಗೆ ಬಾಲಕ ಜೋರಾವರ್‌ ಸಿಂಗ್‌ 9 ವರ್ಷದವನಾಗಿದ್ದರೆ, ಫತೇ ಸಿಂಗ್‌ ಗೆ ಇನ್ನೂ 6 ವರ್ಷ. ಅಣ್ಣ ತಮ್ಮಂದಿರಿಬ್ಬರನ್ನೂ ಅಕ್ಕಪಕ್ಕದಲ್ಲಿ ನಿಲ್ಲಿಸಿ ಮಧ್ಯದಲ್ಲಿ ಹಾಗೂ ಸುತ್ತಲೂ ಗೋಡೆ ಕಟ್ಟಿ ಅವರನ್ನು ಔರಂಗಜೇಬ ಕ್ರೂರವಾಗಿ ಸಾಯಿಸಿದ್ದ. ಆದರೆ ಕೊನೆಯ ಉಸಿರಿನವರೆಗೆ ಔರಂಗಜೇಬನಿಗೆ ತಲೆ ಬಾಗದ ಆ ಬಾಲಕರ ಶೌರ್ಯದ ಸ್ಮರಣೆಗೆಂದೇ ʼವೀರ ಬಾಲ ದಿನʼವನ್ನು ಆಚರಿಸಲಾಗುತ್ತಿದೆ.

ಇಸ್ಲಾಮಿಗೆ ಮತಾಂತರಗೊಳ್ಳಿ ಇಲ್ಲವೇ ಸಾಯಿರಿ ಎಂಬ ಆಯ್ಕೆ ಕೊಟ್ಟಿದ್ದ ಮೊಘಲ್ ದಾಳಿಕೋರ ಕ್ರೂರಿ ಔರಂಗಜೇಬನ ಎದುರಲ್ಲಿ ವೀರಮರಣವನ್ನು ಆಯ್ದುಕೊಂಡ ಬಾಲ ಕಲಿಗಳಿರವರು. ಅವರ ಕಣ್ಣುಗಳಲ್ಲಿದ್ದ ಜ್ವಾಲೆ ನೋಡಲಾಗದೇ ಅವರಿಬ್ಬರನ್ನೂ ದಾಳಿಕೋರರು ಜೀವಂತ ಸಮಾಧಿ ಮಾಡಿದರೆಂದರೆ ಆ ಪುಟಾಣಿ ಬಾಲಕರಿಗಿದ್ದ ಛಾತಿ ಎಂಥಹದ್ದಿರಬೇಡ!

ಸಿಖ್‌ ಧರ್ಮಗುರು ʼಗುರು ಗೋವಿಂದ ಸಿಂಗ್‌ʼ ರಿಗೆ ಅಜಿತ್ ಸಿಂಗ್, ಜುಜಾರ್ ಸಿಂಗ್, ಜೋರಾವರ್ ಸಿಂಗ್ ಮತ್ತು ಫತೇ ಸಿಂಗ್‌ ಎಂಬ 4 ಜನ ಮಕ್ಕಳಿದ್ದರು. ಅವರೆಲ್ಲರೂ ತಮ್ಮ ಬಾಲ ವಯಸ್ಸಿನಲ್ಲಿಯೇ ʼಖಾಲ್ಸಾʼ ದೀಕ್ಷೆ ಪಡೆದಿದ್ದರು. 1705ರ ಸಮಯದಲ್ಲಿ ಔರಂಗ ಜೇಬ ಚಮ್ಕೌರಿನ ಕೋಟೆಗೆ ಮುತ್ತಿಗೆ ಹಾಕಿದಾಗ 18ನೇ ವಯಸ್ಸಿನಲ್ಲಿದ್ದ ಅಜಿತ್‌ ಸಿಂಗ್‌ ತನ್ನ ಸಿಖ್‌ ಪಡೆಗಳೊಂದಿಗೆ ಕೋಟೆಯಿಂದ ಹೊರಬಂದು ಕದನದಲ್ಲಿ ವೀರ ಮರಣವನ್ನಪ್ಪಿದ. 14ವರ್ಷದ ಜುಝಾರ್‌ ಸಿಂಗ್‌ ಕೂಡ ಕೋಟೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ಪ್ರಾಣತ್ಯಾಗ ಮಾಡಿದ. ಕಿರಿಯರಿಬ್ಬರಾದ ಜೋರಾವರ್ ಸಿಂಗ್ ಮತ್ತು ಫತೇ ಸಿಂಗ್‌ ರನ್ನು ಔರಂಗಜೇಬನ ಸೈನಿಕರು ಜೀವಂತ ಸೆರೆ ಹಿಡಿದರು. ಅವರನ್ನು ಇಸ್ಲಾಂ ಗೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಯಿತು. ಆದರೆ ಒಪ್ಪದ ಪುಟಾಣಿ ಬಾಲಕರು ಸಾಯುವ ಆಯ್ಕೆ ಮಾಡಿಕೊಂಡರೇ ವಿನಃ ದಾಳಿಕೋರರೆದುರು ಮಂಡಿಯೂರಲಿಲ್ಲ. ಕೊನೆಗೆ 1708ರಲ್ಲಿ ಗುರು ಗೋವಿಂದ ಸಿಂಹರನ್ನೂ ಮೊಘಲರು ಸಾಯಿಸಿದರು.

ಇನ್ನೂ 19ವಯಸ್ಸೂ ದಾಟಿರದ ಈ ನಾಲ್ಕುಜನ ಬಾಲಕರ ತ್ಯಾಗವನ್ನು ಅತ್ಯಂತ ಶ್ರೇಷ್ಠ ಬಲಿದಾನವೆಂದು ಗೌರವಿಸಲಾಗುತ್ತದೆ. ಇಂದಿಗೂ ಸಿಖ್‌ ಪಂಥದಲ್ಲಿ ಈ ಬಾಲಕರನ್ನು ಚಾರ್‌ ಸಾಹಿಬ್ಜಾದೆ ಎಂದು ಸ್ಮರಿಸಲಾಗುತ್ತದೆ, ದೇಶ ಕಂಡ ಈ ಅತ್ಯುನ್ನತ ಬಾಲ ವೀರರ ಸ್ಮರಣೆಗೆಂದೇ ʼವೀರ ಬಾಲ ದಿನʼವನ್ನು ಆಚರಿಸಲಾಗುತ್ತದೆ. ಆ ಮೂಲಕ ಬಾಲಕರ ಶೌರ್ಯ, ಬಲಿದಾನ, ತ್ಯಾಗವನ್ನು ಗೌರವಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!