March 31, 2026
Tuesday, March 31, 2026
spot_img

Viral | ಇವಳೇನು ರಾಕ್ಷಸಿನಾ?: ಪುಟ್ಟ ನಾಯಿ ಮರಿಗಳನ್ನು ಗೋಡೆಗೆ ಬಡಿದು ಕೊಂದ ಮಹಿಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂಕ ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ದಿನೇ ದಿನೇ ಹೆಚ್ಚುತ್ತಿರುವ ಈ ಕಾಲದಲ್ಲಿ ಮತ್ತೊಂದು ಮನಕಲುಕುವ ಘಟನೆ ತಮಿಳುನಾಡಿನ ಮದುರೈನಲ್ಲಿ ಬೆಳಕಿಗೆ ಬಂದಿದೆ.

ಸಣ್ಣ ವಿಷಯಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಬೀದಿಯಲ್ಲಿ ಆಟವಾಡುತ್ತಿದ್ದ ನಾಯಿ ಮರಿಗಳನ್ನು ಗೋಡೆಗೆ ಅಪ್ಪಳಿಸಿ ಕೊಂದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿವೆ.

ವರದಿಗಳ ಪ್ರಕಾರ, ಸ್ಥಳೀಯವಾಗಿ ಇಬ್ಬರು ನೆರೆಹೊರೆಯವರ ನಡುವೆ ಜಗಳ ನಡೆದಿತ್ತು. ಈ ವೇಳೆ ಮಹಿಳೆಯ ಮಗನ ಮೇಲೆ ಕಲ್ಲು ಎಸೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಹಿಳೆ ತನ್ನ ಕೋಪವನ್ನು ರಸ್ತೆ ಬಳಿ ಆಟವಾಡುತ್ತಿದ್ದ ನಾಯಿ ಮರಿಗಳ ಮೇಲೆ ಹೊರಹಾಕಿದ್ದಾಳೆ. ಒಂದರ ನಂತರ ಒಂದರಂತೆ ನಾಯಿ ಮರಿಗಳನ್ನು ಹಿಡಿದು ಗೋಡೆಗೆ ಅಪ್ಪಳಿಸಿದ್ದರಿಂದ ಎರಡು ಮರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

ಇದನ್ನೂ ಓದಿ:

ಈ ಭೀಕರ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಮಹಿಳೆ ನಾಯಿ ಮರಿಗಳನ್ನು ನಿರ್ದಯವಾಗಿ ಹೊಡೆಯುವ ದೃಶ್ಯಗಳು ಜನರನ್ನು ಕಳವಳಗೊಳಿಸಿವೆ. ವಿಡಿಯೋ ವೈರಲ್ ಆದ ನಂತರ ಪ್ರಾಣಿ ಪ್ರೇಮಿಗಳು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಸ್ಥಳೀಯರು ಹಾಗೂ ಪ್ರಾಣಿ ಕಲ್ಯಾಣ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯಾಗಿರುವ ಮೀನಾಕ್ಷಿ ಮಿಶ್ರಾ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರು ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !