April 11, 2026
Saturday, April 11, 2026
spot_img

Viral | ಮಗಳ ಮದುವೆ ಇದೆ, ದಯವಿಟ್ಟು ಬೆಳೆ ಖರೀದಿಸಿ: ಮಾರ್ಕೆಟ್ ನಲ್ಲಿ ನಿಂತು ಕಣ್ಣೀರು ಹಾಕಿದ ರೈತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಗಳ ಮದುವೆಗೆ ಹಣಕ್ಕಾಗಿ ಬೆಳೆ ಮಾರಲು ಮಾರುಕಟ್ಟೆಗೆ ಬಂದ ರೈತನೊಬ್ಬ ಕಣ್ಣೀರು ಸುರಿಸಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಹರಾಜು ಪ್ರಕ್ರಿಯೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರೈತ ತನ್ನ ಬೆಳೆ ಖರೀದಿಸುವಂತೆ ಕಣ್ಣೀರು ಹಾಕುತ್ತಾ ಕೈಮುಗಿದು ಬೇಡಿಕೊಂಡಿದ್ದಾನೆ. ಈ ಘಟನೆ ಗುಣ ಜಿಲ್ಲೆಯ ನಾನಾಖೇಡಿ ಕೃಷಿ ಉಪಜ್ ಮಂಡಿಯಲ್ಲಿ ನಡೆದಿದೆ.

ರೈತನ ಮಗಳ ಮದುವೆ ಮುಂದಿನ ದಿನವೇ ನಿಗದಿಯಾಗಿದ್ದರಿಂದ ಮದುವೆ ಖರ್ಚಿಗಾಗಿ ಕೊತ್ತಂಬರಿ ಹಾಗೂ ಸಾಸಿವೆ ಬೆಳೆಯನ್ನು ಮಾರಾಟ ಮಾಡಲು ಅವರು ಮಾರುಕಟ್ಟೆಗೆ ತಂದಿದ್ದರು. ಆದರೆ ಹರಾಜು ಪ್ರಕ್ರಿಯೆ ವೇಳೆ ಉಂಟಾದ ವಿವಾದದಿಂದ ಖರೀದಿ ಸ್ಥಗಿತಗೊಂಡಿದ್ದು, ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಇದನ್ನೂ ಓದಿ:

ವರದಿಗಳ ಪ್ರಕಾರ, ಹರಾಜು ಕರ್ತವ್ಯದಲ್ಲಿದ್ದ ಮಾರುಕಟ್ಟೆ ಇನ್ಸ್‌ಪೆಕ್ಟರ್ ರಾಜ್‌ಕುಮಾರ್ ಶರ್ಮಾ ಅವರ ವರ್ತನೆಯೇ ಗಲಾಟೆಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಕೊತ್ತಂಬರಿ ಬೆಳೆ ಪ್ರತಿ ಕ್ವಿಂಟಲ್‌ಗೆ 5,700 ರೂ. ಬಿಡ್ ಬಂದಿದ್ದರೂ ದಾಖಲೆಗಳಲ್ಲಿ 5,400 ರೂ. ಎಂದು ಬರೆದಿದ್ದರಿಂದ ರೈತ ಪ್ರಶ್ನೆ ಎತ್ತಿದ್ದು, ಬಳಿಕ ವಿವಾದ ತೀವ್ರಗೊಂಡಿತು. ಇದರಿಂದ ವ್ಯಾಪಾರಿಗಳು ಬಿಡ್ಡಿಂಗ್ ನಿಲ್ಲಿಸಿ ಖರೀದಿ ಸ್ಥಗಿತಗೊಳಿಸಿದರು.

ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದರು. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು. ಘಟನೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ಮಂಡಿ ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !