June 16, 2026
Tuesday, June 16, 2026
spot_img

ಆಫ್ರಿಕಾದಲ್ಲಿ ಕರ್ನಾಟಕದ ಹಕ್ಕಿ-ಪಿಕ್ಕಿ ಕುಟುಂಬಕ್ಕೆ ವೀಸಾ ವಂಚನೆ; ಪಾಸ್‌ಪೋರ್ಟ್ ಮರಳಿ ಪಡೆಯಲು ಕೇಂದ್ರಕ್ಕೆ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗಿಡಮೂಲಿಕೆ ವ್ಯವಹಾರಕ್ಕಾಗಿ ಪೂರ್ವ ಆಫ್ರಿಕಾದ ಮೊಜಾಂಬಿಕ್ ದೇಶಕ್ಕೆ ತೆರಳಿದ್ದ ಶಿವಮೊಗ್ಗ ಜಿಲ್ಲೆಯ ಹಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗದ ಒಂದೇ ಕುಟುಂಬದ ಮೂವರು ಸದಸ್ಯರು ಅಲ್ಲಿನ ಸ್ಥಳೀಯ ಏಜೆಂಟ್‌ನಿಂದ ವಂಚನೆಗೊಳಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೀಸಾ ನವೀಕರಣದ ಹೆಸರಿನಲ್ಲಿ ಏಜೆಂಟ್ ಇವರ ಪಾಸ್‌ಪೋರ್ಟ್ ಹಾಗೂ ಲಕ್ಷಾಂತರ ರೂ. ಹಣವನ್ನು ಪಡೆದು ನಾಪತ್ತೆಯಾಗಿದ್ದು, ಪ್ರಸ್ತುತ ಈ ಕುಟುಂಬವು ವಿದೇಶಿ ನೆಲದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗುವ ಭೀತಿಯಲ್ಲಿದೆ.‌

ಏನಿದು ಘಟನೆ?

ಶಿವಮೊಗ್ಗದ ಮಿಲನ್ ಕುಮಾರ್, ಅವರ ಪತ್ನಿ ಕಾವ್ಯ ಹಾಗೂ ಸಂಬಂಧಿ ಗಂಭೀರ್ ಎಂಬುವರು ಮೂರು ತಿಂಗಳ ಬಿಸಿನೆಸ್ ವೀಸಾ ಪಡೆದು ಎರಡು ತಿಂಗಳ ಹಿಂದೆ ಮೊಜಾಂಬಿಕ್‌ಗೆ ತೆರಳಿದ್ದರು. ಅಲ್ಲಿ ತಮ್ಮ ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳ ವ್ಯಾಪಾರವನ್ನು ಮಾಡುತ್ತಿದ್ದರು. ವೀಸಾ ಅವಧಿ ಮುಗಿಯುತ್ತಾ ಬಂದಿದ್ದರಿಂದ, ಅದನ್ನು ನವೀಕರಿಸಲು ಅಲ್ಲಿನ ಸ್ಥಳೀಯ ಏಜೆಂಟ್ ಒಬ್ಬನನ್ನು ಸಂಪರ್ಕಿಸಿದ್ದರು. ವೀಸಾ ನವೀಕರಣದ ಪ್ರಕ್ರಿಯೆಗಾಗಿ ಆ ಏಜೆಂಟ್ ಈ ಕುಟುಂಬದಿಂದ ಮೂರು ಪಾಸ್‌ಪೋರ್ಟ್‌ಗಳು ಹಾಗೂ ಸುಮಾರು 4 ಲಕ್ಷ ರೂ. ನಗದನ್ನು ಪಡೆದುಕೊಂಡಿದ್ದನು ಎನ್ನಲಾಗಿದೆ.

ಆತಂಕದಲ್ಲಿ ಕುಟುಂಬ:

ಹಣ ಮತ್ತು ದಾಖಲೆಗಳನ್ನು ಪಡೆದ ಏಜೆಂಟ್, ಪ್ರಸ್ತುತ ಮೊಜಾಂಬಿಕ್ ರಾಜಧಾನಿ ಮಾಪುಟೊದಿಂದ ಸುಮಾರು 2,000 ಕಿಲೋಮೀಟರ್ ದೂರದ ಪ್ರದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದಾನೆ. ಕಳೆದ ಒಂದು ತಿಂಗಳಿನಿಂದ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ಕೈಯಲ್ಲಿ ಪಾಸ್‌ಪೋರ್ಟ್ ಇಲ್ಲದ ಕಾರಣ ಈ ಕುಟುಂಬವು ತಂಗಿರುವ ಕೋಣೆಯಿಂದ ಹೊರಬರಲಾರದ ಸ್ಥಿತಿಯಲ್ಲಿದೆ. ವೀಸಾ ಅವಧಿ ಮುಗಿದರೆ ಅಲ್ಲಿನ ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಆತಂಕದಲ್ಲಿ ಇವರಿದ್ದಾರೆ.

ಸಹಾಯಕ್ಕಾಗಿ ವಿಡಿಯೋ ಮನವಿ:

ಸಂಕಷ್ಟದಲ್ಲಿರುವ ಕುಟುಂಬವು ಮೊಜಾಂಬಿಕ್‌ನಿಂದಲೇ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ತಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆಸಿಕೊಳ್ಳಲು ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಮೊಜಾಂಬಿಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕಣ್ಣೀರು ಹಾಕಿದ್ದಾರೆ. ಕರ್ನಾಟಕ ಹಕ್ಕಿ-ಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ ಪುನೀತ್ ಕುಮಾರ್ ಆರ್, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಸರ್ಕಾರದ ಗಮನ ಸೆಳೆದಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !