ಹೊಸದಿಗಂತ ವರದಿ, ಉಡುಪಿ:
ಬ್ರಹ್ಮಾವರ ತಾಲೂಕಿನ ಕುಮ್ರಗೊಡು ಗ್ರಾಮದ ಮಿಲನ್ ರೆಸಿಡೆನ್ಸಿಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆ ವಿಶಾಲ ಗಾಣಿಗ ರವರನ್ನು ಪತಿ ರಾಮಕೃಷ್ಣ ಗಾಣಿಗ ಸುಪಾರಿ ನೀಡಿ ಭೀಕರವಾಗಿ ಕೊಲೆ ಮಾಡಿಸಿದ್ದ ಇಬ್ಬರು ಸುಪಾರಿ ಕಿಲ್ಲರ್ ಗಳಲ್ಲಿ ತಲೆಮರೆಸಿಕೊಂಡಿದ್ದ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು (21) ಮಹಾರಾಷ್ಟ್ರ ಈತನನ್ನು ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಬಂಧಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಬ್ರಹ್ಮಾವರ ವೃತ್ತದ ಕೋಟ, ಬ್ರಹ್ಮಾವರ, ಹಿರಿಯಡ್ಕ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿರುತ್ತಾರೆ.
ಈತ 2021 ಜುಲೈ 12 ರಂದು ವಿಶಾಲ ಗಾಣಿಗ ಕೊಲೆಯ ನಂತರ ತನ್ನ ಸ್ವಂತ ಮನೆ ಮಹಾರಾಷ್ಟ್ರವನ್ನು ಬಿಟ್ಟು ನೇಪಾಳ ಗಡಿಯಲ್ಲಿನ ಮಹಾರಾಜ ಗಂಜ್ ಪರಿಸರದಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದನು. ಈ ಆರೋಪಿಯಿಂದ ಕೊಲೆಯ ಬಗ್ಗೆ ಹಚ್ಚಿನ ತನಿಖೆ ನಡೆಸಲು ಪೊಲೀಸ್ ಕಸ್ಟಡಿಗೆ ಪಡೆಯುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕ್ರಿಯೆ ನಡೆಯುತ್ತಿದೆ.
ಈ ಪ್ರಕರಣದ ತನಿಖಾಧಿಕಾರಿಯಾದ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭರವರ ನೇತೃತ್ವದಲ್ಲಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಹಾದಿಮನಿ, ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ, ಪ್ರವೀಣ್ ಶೆಟ್ಟಿಗಾರ್ ರವರನ್ನು ಒಳಗೊಂಡ ವಿಶೇಷ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.