ನೂತನ ಸ್ಟಾರ್ಟಪ್‌ ನೀತಿಗೆ ಸಂಪುಟ ಅಸ್ತು: 5 ವರ್ಷಗಳಲ್ಲಿ 10 ಸಾವಿರ ಕಂಪನಿಗಳ ಸ್ಥಾಪನೆಗೆ ಗುರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2027ರ ಹೊತ್ತಿಗೆ ರಾಜ್ಯದಲ್ಲಿ 25 ಸಾವಿರ ನವೋದ್ಯಮಗಳು ನೆಲೆಯೂರುವಂತೆ ಮಾಡುವ ಗುರಿಯುಳ್ಳ 2022-27ರ ನಡುವಿನ ಐದು ವರ್ಷಗಳ ಅವಧಿಯ ಹೊಸ ಸ್ಟಾರ್ಟಪ್‌ ನೀತಿಗೆ ರಾಜ್ಯ ಸಚಿವ ಸಂಪುಟವು ಗುರುವಾರ ಅನುಮೋದನೆ ನೀಡಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್ .ಅಶ್ವತ್ಥನಾರಾಯಣ ಹೇಳಿದ್ದಾರೆ.

‘ರಾಜ್ಯದಲ್ಲಿ ಸದ್ಯಕ್ಕೆ 15 ಸಾವಿರ ಸ್ಟಾರ್ಟಪ್‌ಗಳಿವೆ. ಹೊಸ ನೀತಿಯಿಂದ ಇನ್ನೂ 10 ಸಾವಿರ ನವೋದ್ಯಮಗಳು ನಮ್ಮಲ್ಲಿ ಅಸ್ತಿತ್ವಕ್ಕೆ ಬರಲಿವೆ. ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ರೂಪಿಸಿರುವ ಈ ನೀತಿ ಕರ್ನಾಟಕವನ್ನು ದೇಶದ ಸ್ಟಾರ್ಟಪ್‌ ವಲಯದಲ್ಲಿ ‘ಚಾಂಪಿಯನ್ ರಾಜ್ಯ’ವನ್ನಾಗಿ ಪ್ರತಿಷ್ಠಾಪಿಸುವ ಗುರಿ ಹೊಂದಿದೆ. ಇದರ ಭಾಗವಾಗಿ ಅಧಿಕ ಪ್ರಮಾಣದ ಬೆಳವಣಿಗೆ ದಾಖಲಿಸುವಂಥ ಸ್ಟಾರ್ಟಪ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗುವುದು’ ಎಂದು ವಿವರಿಸಿದ್ದಾರೆ.

ಹೊಸ ನೀತಿಯು ಮುಖ್ಯವಾಗಿ ಬೆಂಗಳೂರಿನಿಂದ ಹೊರಗಿರುವ ತಂತ್ರಜ್ಞಾನ ಕ್ಲಸ್ಟರ್‍‌ಗಳಲ್ಲಿ ನವೋದ್ಯಮಗಳನ್ನು ಪ್ರೋತ್ಸಾಹಿಸಲಿದ್ದು, ಇದು ನನಸಾಗುವಂಥ ಕಾರ್ಯ ಪರಿಸರ ನಿರ್ಮಿಸಲಿದೆ. ಜತೆಗೆ ಸಾಮಾಜಿಕ ಉದ್ಯಮಶೀಲತೆ, ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಆಡಳಿತದಲ್ಲಿ ನಾವೀನ್ಯತೆಯ ತಂತ್ರಜ್ಞಾನ ಕ್ಷೇತ್ರಗಳಿಗೆ ಇದು ಇಂಬು ನೀಡಲಿದೆ. ಈ ಮೂಲಕ ಈಗ ನಾವು ಎದುರಿಸುತ್ತಿರುವ ಪರಿಸರ, ಸಾಮಾಜಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದ್ದು, ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!