May 2, 2026
Saturday, May 2, 2026
spot_img

ಬಂಗಾಳದಲ್ಲಿ ಕೇಂದ್ರ ಸಿಬ್ಬಂದಿ ಕಣ್ಗಾವಲಿನಲ್ಲಿ ವೋಟ್ ಕೌಂಟಿಂಗ್: ‘ಸುಪ್ರೀಂ’ನಲ್ಲಿ ಟಿಎಂಸಿಗೆ ಹಿನ್ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ಮತ ಎಣಿಕೆಗೆ ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ಮಾತ್ರ ಬಳಸಿಕೊಳ್ಳಬೇಕೆಂಬ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಚುನಾವಣಾ ಆಯೋಗವು ಮತ ಎಣಿಕೆಯ ಪಾರದರ್ಶಕತೆಗಾಗಿ ಕೇಂದ್ರ ಸರ್ಕಾರದ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಿತ್ತು. ಇದನ್ನು ವಿರೋಧಿಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಮೊದಲು ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಅರ್ಜಿ ತಿರಸ್ಕೃತಗೊಂಡ ನಂತರ, ಪಕ್ಷವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ನ್ಯಾಯಮೂರ್ತಿ ಬಾಗ್ಚಿ ಅವರ ನೇತೃತ್ವದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. “ಮತ ಎಣಿಕೆಯ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿರುತ್ತಾರೆ. ಚುನಾವಣಾ ಆಯೋಗದ ಈ ನಿರ್ಧಾರವು ಯಾವುದೇ ನಿಯಮಗಳ ಉಲ್ಲಂಘನೆಯಾಗಿಲ್ಲ” ಎಂದು ಪೀಠವು ಸ್ಪಷ್ಟಪಡಿಸಿದೆ. ಅಲ್ಲದೆ, ಕೌಂಟಿಂಗ್ ಅಧಿಕಾರಿಗಳು ಕೇಂದ್ರ ಸರ್ಕಾರದವರೇ ಆಗಿರಲಿ ಅಥವಾ ರಾಜ್ಯ ಸರ್ಕಾರದವರೇ ಆಗಿರಲಿ, ಅವರು ಆಯೋಗದ ಅಡಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ಅಂಶವನ್ನು ನ್ಯಾಯಾಲಯ ಎತ್ತಿ ತೋರಿಸಿದೆ.

ಟಿಎಂಸಿ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಮೀನಾಕ್ಷಿ ಅರೋರಾ ವಾದ ಮಂಡಿಸಿದರು. “ಏಪ್ರಿಲ್ 13ರಂದು ಹೊರಡಿಸಲಾದ ಈ ಆದೇಶದ ಬಗ್ಗೆ ನಮಗೆ ಏಪ್ರಿಲ್ 29ರವರೆಗೆ ಯಾವುದೇ ಮಾಹಿತಿ ಇರಲಿಲ್ಲ” ಎಂದು ಅವರು ಆಯೋಗದ ಪಾರದರ್ಶಕತೆಯನ್ನು ಪ್ರಶ್ನಿಸಿದರು.

ಚುನಾವಣಾ ಆಯೋಗದ ವಾದ: ಆಯೋಗದ ಪರ ವಾದಿಸಿದ ಹಿರಿಯ ವಕೀಲ ಡಿ.ಎಸ್. ನಾಯ್ಡು ಅವರು, “ಮತ ಎಣಿಕೆಯ ಸಂಪೂರ್ಣ ನಿಯಂತ್ರಣ ರಿಟರ್ನಿಂಗ್ ಅಧಿಕಾರಿಗಳ ಕೈಯಲ್ಲೇ ಇರುತ್ತದೆ. ಇವರು ರಾಜ್ಯ ಸರ್ಕಾರದ ಅಧಿಕಾರಿಗಳೇ ಆಗಿರುತ್ತಾರೆ. ಹೀಗಾಗಿ ಪಕ್ಷಪಾತದ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಸಮರ್ಥಿಸಿಕೊಂಡರು.

ಮೈಕ್ರೋ ಅಬ್ಸರ್ವರ್‌ಗಳು ಮತ್ತು ವಿವಿಧ ಪಕ್ಷಗಳ ಕೌಂಟಿಂಗ್ ಏಜೆಂಟ್‌ಗಳು ಈಗಾಗಲೇ ಕಣ್ಗಾವಲು ವ್ಯವಸ್ಥೆಯಲ್ಲಿ ಇರುವುದರಿಂದ, ಹೆಚ್ಚುವರಿ ಆತಂಕದ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಚುನಾವಣಾ ಪ್ರಕ್ರಿಯೆಯ ನಿರ್ಧಾರಗಳು ಆಯೋಗದ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿ ಟಿಎಂಸಿ ಅರ್ಜಿಯನ್ನು ಕಸದ ಬುಟ್ಟಿಗೆ ಹಾಕಿದೆ.

ಇದರೊಂದಿಗೆ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆಯೇ ಕೇಂದ್ರ ಸರ್ಕಾರಿ ಸಿಬ್ಬಂದಿಗಳ ಉಸ್ತುವಾರಿಯಲ್ಲಿ ಮತ ಎಣಿಕೆ ನಡೆಯುವುದು ಖಚಿತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !