July 10, 2026
Friday, July 10, 2026
spot_img

ಜಿಲ್ಲಾ ಪ್ರವಾಸದ ಹೆಸರಲ್ಲಿ ಮತದಾರರ ಪಟ್ಟಿ ಅಕ್ರಮ? ಸಿಎಂ ವಿರುದ್ಧ ಹೆಚ್‌ಡಿಕೆ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಒಂದೆಡೆ ಭಾರೀ ಮಳೆಯಾಗುತ್ತಿದ್ದರೆ, ಮತ್ತೊಂದೆಡೆ ಬರಗಾಲದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆ ಜಿಲ್ಲೆಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಸಿಎಂ ಈ ಪ್ರವಾಸದ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಮ್ಮ ಪರವಾಗಿ ದುರುಪಯೋಗಪಡಿಸಿಕೊಳ್ಳಲು ಸಿಎಂ ಈ ಪ್ರವಾಸಗಳನ್ನು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅಕ್ರಮಗಳನ್ನು ತಡೆಯಲು ತಾವು ನೇರವಾಗಿ ಕೇಂದ್ರ ಚುನಾವಣಾ ಆಯೋಗದ (ECI) ಮೊರೆ ಹೋಗುತ್ತಿರುವುದಾಗಿ ಪ್ರಕಟಿಸಿದ್ದಾರೆ.

ಜಿಲ್ಲಾ ಪ್ರವಾಸದ ಅಸಲಿ ಸೀಕ್ರೆಟ್ ಏನು?

ರಾಜ್ಯದಲ್ಲಿ ಪ್ರಾಕೃತಿಕ ವಿಕೋಪಗಳ ಪರಿಶೀಲನೆಯ ಹೆಸರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅವರ ಅಸಲಿ ಉದ್ದೇಶ ಮಳೆ-ಬರ ವೀಕ್ಷಣೆ ಅಲ್ಲ, ಬದಲಿಗೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ಎಸಗುವುದಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳಂತಹ ಖಾಸಗಿ ಸ್ಥಳಗಳಲ್ಲಿ ಜನರನ್ನು ಗುಂಪು ಗುಂಪಾಗಿ ಸೇರಿಸಿ, ಅರ್ಹರಲ್ಲದವರನ್ನು ಮತದಾರರ ಪಟ್ಟಿಗೆ ಸೇರಿಸುವ ಮತ್ತು ವಿರೋಧ ಪಕ್ಷದ ಬೆಂಬಲಿಗರ ಹೆಸರುಗಳನ್ನು ಕೈಬಿಡುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ:

ಚುನಾವಣಾ ಆಯುಕ್ತರ ಭೇಟಿಗೆ ನಿರ್ಧಾರ

ರಾಜ್ಯದ ಅಧಿಕಾರಿಗಳನ್ನು ಕಾಂಗ್ರೆಸ್ ಸರ್ಕಾರ ತನ್ನ ಜೀತದಾಳುಗಳಂತೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, “ಕೂಡಲೇ ರಾಜ್ಯದಲ್ಲಿ ಈಗ ನಡೆದಿರುವ ಎಲ್ಲಾ ಎಸ್‌ಐಆರ್ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕು. ಮುಂಬರುವ ಚುನಾವಣೆಗಳು ನಿಷ್ಪಕ್ಷಪಾತವಾಗಿ ನಡೆಯಲು ಹೊರ ರಾಜ್ಯದ ಅಧಿಕಾರಿಯೊಬ್ಬರನ್ನು ನೇಮಕ ಮಾಡಿ ಹೊಸದಾಗಿ ಪ್ರಕ್ರಿಯೆ ನಡೆಸಬೇಕು ಎಂದು ನಾನು ಕೇಂದ್ರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ” ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !