ಮಾಂಗ್ರೋವ್ ವನದ ನಡುವೆ ಕಯಾಕ್ ಮೂಲಕ ನಡೆಯಿತು ಮತದಾನದ ಜಾಗೃತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ವಿಧಾನಸಭಾ ಚುನಾವಣೆಗೆ ಒಂದೆಡೆ ಭರ್ಜರಿ ಚುನಾವಣೆ ಪ್ರಚಾರ ನಡೆಯುತ್ತಿದ್ದು, ಇದರ ಜೊತೆಗೆ ಇಲಾಖೆಗಳಿಂದ ಈ ಬಾರಿ ಹೆಚ್ಚಿನ ಮತದಾನ ನಡೆಯಲು ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.

ಇದರ ಭಾಗವಾಗಿ ಉಡುಪಿ ಜಿಲ್ಲೆಯಲ್ಲಿ ಸ್ವೀಪ್ ವತಿಯಿಂದ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗ ಅತ್ಯಂತ ವಿಶಿಷ್ಟ ರೀತಿಯಲ್ಲಿ ಹೊಳೆಯಲ್ಲಿ ಕಯಾಕಿಂಗ್ ಮೂಲಕ ತೆರಳಿ ಮಾಂಗ್ರೋವ್ ಕಾಡುಗಳ ಮಧ್ಯೆ ಕಯಾಕ್ ಗಳಲ್ಲಿ ವಿನೂತನ ರೀತಿಯಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲಾಗಿದೆ.

ಜಿಲ್ಲಾಡಳಿತ ಉಡುಪಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸಾಲಿಗ್ರಾಮದ ಸೀತಾ ನದಿಯ ಹಿನ್ನೀರಿನಲ್ಲಿ ನಡುವಿನ ದಟ್ಟ ಕಾಂಡ್ಲಾವನದ ನಡುವೆ ಕಯಾಕಿಂಗ್ ಮಾಡಲು ಬಳಸುವ ದೋಣಿಗಳ ಮೂಲಕ ಮತದಾನ ಜಾಗೃತಿಯ ಸಂದೇಶವನ್ನು ಸಾರಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ ಸಾಲಿಗ್ರಾಮ ಬಳಿಯ ಕಯಾಕಿಂಗ್ ಪಾಯಿಂಟ್ ಬಳಿಗೆ ತೆರಳಿದ, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ , ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಯತೀಶ್, ಅವರು ಕಯಾಕಿಂಗ್ ಪ್ರಾರಂಭದ ಸ್ಥಳದಲ್ಲಿ ತುಳುನಾಡಿನ ಸಾಂಪ್ರದಾಯಿಕ ಅಡಿಕೆ ಮುಟ್ಟಾಳೆ ಧರಿಸಿ, ಸ್ಥಳದಲ್ಲಿ ಅಳವಡಿಸಲಾಗಿದ್ದ ನೈತಿಕ ಮತದಾನ ಪ್ರತಿಜ್ಞೆ ಕುರಿತ ಫಲಕದಲ್ಲಿ ಸಹಿ ಮಾಡಿ, ಸಂಪೂರ್ಣ ಸುರಕ್ಷತಾ ಉಪಕರಣಗಳನ್ನು ಧರಿಸಿ ಕಯಾಕಿಂಗ್ ಆರಂಭಿಸಿದರು.

ಸುಮಾರು 30 ನಿಮಿಷಗಳ ಕಯಾಕಿಂಗ್ ನಂತರ ಮ್ಯಾಂಗ್ರೋವ್ ಕಾಡುಗಳ ಮಧ್ಯೆ ಇರುವ ಪ್ರದೇಶದಲ್ಲಿ ಸುಮಾರು 40 ಕ್ಕೂ ಹೆಚ್ಚು ಕಯಾಕ್ ದೋಣಿಗಳ ಮೂಲಕ ಮತದಾನ ದಿನವಾದ, ಮೇ 10 ದಿನಾಂಕದ ಚಿತ್ರಣ ರೂಪಿಸಿ ಮತ್ತು ಮತದಾನ ಜಾಗೃತಿಯ ಫಲಕವನ್ನು ನೀರಿನ ಮೇಲೆ ಪ್ರದರ್ಶಿಸಿ ಅತ್ಯಂತ ಆಕರ್ಷಕ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.

ಈ ವಿಶಿಷ್ಠ ಕಾರ್ಯಕ್ರಮಕ್ಕೆ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್ ನಲ್ಲಿ ಕಾರ್ಯನಿರ್ವಹಿಸುವ ವಿವಿಧ ಸಂಸ್ಥೆಗಳು ಮತ್ತು ಸಿಬ್ಬಂದಿ ಅಗತ್ಯ ಸಹಕಾರ ನೀಡುವುದರ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!