Thursday, August 18, 2022

Latest Posts

ವಿಎಸ್‌ಕೆ ಮಾಧ್ಯಮ ಪ್ರಶಸ್ತಿ ಪ್ರದಾನ | ಪತ್ರಿಕಾರಂಗ ಆತ್ಮಸಾಕ್ಷಿ, ಪ್ರಜ್ಞೆ ಜಾಗೃತಗೊಳಿಸಬೇಕು: ವಿ. ನಾಗರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕಾರಂಗವು ಆತ್ಮಸಾಕ್ಷಿ, ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿತ್ತು, ಈಗಲೂ ಅದೇ ಕೆಲಸ ಆಗಬೇಕಾಗಿದೆ. ಸಮಾಜಕ್ಕೆ ಬೇಕಾದ ಶಿಕ್ಷಣ, ಸುಧಾರಣೆಯ ಕಾರ್ಯ ಯಶಸ್ವಿಯಾಗಿ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ್ ವಿ. ನಾಗರಾಜ್ ಹೇಳಿದರು.

ಅವರು ಭಾನುವಾರ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ವಿಶ್ವ ಸಂವಾದ ಕೇಂದ್ರದ ವಿಎಸ್‌ಕೆ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಹಳೆ, ದುಂದುಭಿ ಭೂಗತ ಪತ್ರಿಕೆಗಳು ಸತ್ಯನಿಷ್ಠೆಯ ವರದಿಗಳನ್ನು ಕೊಡುತ್ತಿದ್ದವು. ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಸತ್ಯ ಎನ್ನುವ ಬಲವಾದ ನಂಬಿಕೆ ಇದೆ. ಅದನ್ನು ಉಳಿಸಿಕೊಳ್ಳಬೇಕು ಎಂದರು.

ನಾರದ ಮಹರ್ಷಿಗಳು ಜಗತ್ತಿನ ಮೊದಲ ಪತ್ರಕರ್ತ ಎಂದು ಹೇಳಲಾಗುತ್ತದೆ. ಧರ್ಮ ಸಂಸ್ಥಾಪನೆ ಕಾರ್ಯದಲ್ಲಿ ಲೋಕಕ್ಕೆ ಹಿತವನ್ನು ಮಾಡುವ ಪ್ರಕಾಶಿತಕ್ಕೆ ಅವರು ಸಂಕೇತವಾಗಿದ್ದಾರೆ. ವಿಶ್ವ ಸಂವಾದ ಕೇಂದ್ರ ನಾರದ ಜಯಂತಿ ಆಚರಿಸುವುದರಿಂದ ಮತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೊದಲು ಬಂಸಿದ್ದು ಪತ್ರಕರ್ತರನ್ನು ಆಗಿದ್ದರಿಂದ ಇಂದು ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಜ್ಞಾ ಪ್ರವಾಹ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕ ರಘುನಂದನ್ ಮಾತನಾಡಿ, ಪತ್ರಕರ್ತರು ಸತ್ಯ ಪಕ್ಷಪಾತಿಗಳಾಗಿರಬೇಕು. ಆದರೆ ಮಾಧ್ಯಮಗಳಲ್ಲಿ ಈಗಿನ ವರದಿಗಳನ್ನು ಗಮನಿಸಿದಾಗ ಆತಂಕವಾಗುತ್ತದೆ. ಆಜಾದಿ, ಫ್ರೀಡಂ ಎನ್ನುವ ಚರ್ಚೆಗಳು ಹೆಚ್ಚಾಗುತ್ತಿವೆ. ಆಜಾದಿಗೆ ಇನ್ನೊಂದು ಹೆಸರು ಹಿಂದು. ಇತ್ತೀಚೆಗೆ ಯುವ ಪತ್ರಕರ್ತನೊಬ್ಬನ ಮೇಲೆ ಹಲ್ಲೆಯಾದಾಗ ಇಡೀ ಪತ್ರಿಕಾರಂಗ ಎದ್ದು ನಿಲ್ಲಬೇಕಾಗಿತ್ತು. ಆದರೆ, ಎಡ-ಬಲವೆಂಬ ವಿಚಿತ್ರ ಸಂಕ್ರಮಣ ಕಾಲದಲ್ಲಿದ್ದೇವೆ ಎಂದು ವಿಷಾದಿಸಿದರು.

ಪತ್ರಕರ್ತರ ದಿನಚರಿಯೇ ವಿಚಿತ್ರವಾಗಿರುತ್ತದೆ. ಗಣ್ಯರು ಬಂದಾಗ ಪರದಾಟದ ನಡುವೆ ಕರ್ತವ್ಯ ನಿರ್ವಹಿಸುತ್ತಾರೆ. ಅನೇಕ ಪತ್ರಕರ್ತರು ಸತ್ಯನಿಷ್ಠೆ ಮತ್ತು ಅಧ್ಯಯನಶೀಲರಾಗಿ ಕೆಲಸ ಮಾಡುತ್ತಾರೆ. ಆದರೆ ಸಮಾಜದಲ್ಲಿ ನಡೆಯುವ ಎಲ್ಲ ತಪ್ಪುಗಳಿಗೆ ಪತ್ರಕರ್ತರರನ್ನು ಬಹಳಷ್ಟು ದೂಷಣೆ ಮಾಡುತ್ತಾರೆ. ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಉಳಿವೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು ಎಂದು ಹೇಳಿದರು.

ಈ ತಲ್ಲಣದ ಸಂದರ್ಭಗಳಲ್ಲಿ ದೃಢವಾಗಿ ನಿಲ್ಲುವವರ ಅವಶ್ಯಕತೆ ಬಹಳವಿದೆ. ಎಷ್ಟೇ ಆರೋಪಗಳು ಬಂದರೂ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೊಡ್ಡ ಪ್ರಯತ್ನ ತಥಾಕಥಿತ ಬಲಪಂತೀಯರು ಮಾಡಿದ್ದಾರೆ. ಎಡ, ಉದಾರವಾರಿಗಳು, ಸತ್ಯಪಕ್ಷಪಾತಿಗಳು ಎನ್ನುವವರ ಮಧ್ಯೆ ಬಲಪಂಥೀಯರೆಂದು ದೂಷಣೆ ಮಾಡಲಾಗುತ್ತಿದೆ. ಇವೆಲ್ಲದಕ್ಕೂ ನಾವು ತಯಾರಾಗಬೇಕು. ನಿರ್ಭೀತವಾದ ಸಮಯ ಬಂದಿದೆ. ಈ ಹಿಂದೆ ಅವರು ಬರೆದಿದ್ದೇ ಸತ್ಯ ಎಂದು ತಿಳಿಯಲಾಗಿತ್ತು. ಅವರು ಹೇಳುತ್ತಿರುವುದು ಸುಳ್ಳು, ಅದನ್ನು ಪರಿಶೀಲನೆ ಮಾಡಲು ಅವಕಾಶವಿದೆ ಎಂಬುದು ಸಾಮಾಜಿಕ ಜಾಲತಾಣಗಳು ಬಂದ ನಂತರ ತಿಳಿಯುತ್ತಿದೆ ಎಂದರು.

ಹೊಸದಿಗಂತದ ವಿಶ್ರಾಂತ ಸಂಪಾದಕ ಮತ್ತು ಅಂಕಣಕಾರ ದು.ಗು. ಲಕ್ಷ್ಮಣ್ ಅವರಿಗೆ ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿ, ಹೊಸದಿಗಂತದ ವಿಶೇಷ ವರದಿಗಾರ ಎನ್.ಟಿ. ಗುರುವಪ್ಪ ಬಾಳೆಪುಣಿ ಅವರಿಗೆ ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ , ಚೀ.ಜ. ರಾಜೀವ ಅವರಿಗೆ ತಿ.ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಡಾ. ಎಚ್.ಎಸ್. ಪ್ರೇಮಾ ಅವರಿಗೆ ವಿ.ಎಸ್.ಕೆ. ಡಿಜಿಟಲ್ ಮಾಧ್ಯಮ ಪ್ರಶಸ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!