ಹೊಸದಿಗಂತ ವರದಿ,ಮಂಡ್ಯ:
ಚುನಾವಣೆಗೂ ಮುನ್ನ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರೆಲ್ಲ ಸೇರಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದರು. ಆದರೂ ನ್ಯಾಯಾಲಯ ಮತ್ತು ಪ್ರಾಧಿಕಾರ ಹೇಳುವ ಮುನ್ನವೇ ನೀರು ಬಿಟ್ಟಿದ್ದಾದರೂ ಏಕೆ ಎಂದು ಮಾಜಿ ಸಚಿವ ಸಿ.ಟಿ. ರವಿ ಪ್ರಶ್ನಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಸಭಾ ಚುನಾವಣೆಗೂ ಮುಂಚೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ಸಿಗರು ಸೇರಿ ಮೇಕೆದಾಟು ಯೋಜನೆಗಾಗಿ ‘ನಮ್ಮ ನೀರು, ನಮ್ಮ ಹಕ್ಕು’ ಎಂದು ಪಾದಯಾತ್ರೆ ಮಾಡಿದರು. ಆದರೆ ಆದೇಶಕ್ಕೂ ಮುನ್ನ ನೀರು ಬಿಡುಗಡೆ ಮಾಡಿ ರಾಜ್ಯದ ಜನರಿಗೆ ದ್ರೋಹ ಎಸಗಿದರು ಎಂದು ಕಿಡಿಕಾರಿದರು.
ಕಾವೇರಿ ಕರ್ನಾಟಕದ ಸ್ವಾಭಿಮಾನದ ಪ್ರತೀಕ ಮಾತ್ರವಲ್ಲ, ನಮ್ಮ ಜೀವನಾಡಿ. ಮಂಡ್ಯ, ಮೈಸೂರು ಭಾಗದ ರೈತರ ಬದುಕನ್ನು ಹಸನು ಮಾಡಿದೆ. ಕಾವೇರಿ ಇಲ್ಲದೇ ಬೆಂಗಳೂರು ಮಹಾನಗರ ಉಳಿಯೋಕು ಆಗಲ್ಲ . ಕಾವೇರಿ ವಿವಾದ ಇವತ್ತು ನಿನ್ನೆಯದಲ್ಲ. ಅದಕ್ಕೆ ಶತಮಾನದ ಇತಿಹಾಸವಿದೆ. ಕಾವೇರಿ ನದಿ ನೀರನ್ನು ಸಂಕಷ್ಟದ ಪರಿಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕಾದದ್ದು ಆಳುವ ಸರ್ಕಾರಗಳ ಹೊಣೆ ಎಂದರು.
ರೈತರು ಎಂದರೆ ಎಲ್ಲರು ಒಂದೇ
ರೈತರು ಎಂದರೆ ಎಲ್ಲರೂ ಒಂದೇ, ಕರ್ನಾಟಕ-ತಮಿಳುನಾಡು ಎನ್ನುವ ಬೇಧ-ಭಾವವಿಲ್ಲ. ಆದರೆ ಸಂಕಷ್ಟ ಇದ್ದಾಗ ಸೂತ್ರದ ಅನುಗುಣವಾಗಿ ನೀರಿನ ವಿಚಾರ ವ್ಯವಹಾರ ಮಾಡಬೇಕು. ಈಗ ಮಳೆ ಇಲ್ಲ, ಸಂಕಷ್ಟ ಇದೆ. ಇಂತಹ ಪರಿಸ್ಥಿತಿಯಲ್ಲಿ ಅಳೋಕು ಮುಂಚೆ ನೀರು ಕೊಟ್ಟಿದ್ದಾರೆ, ಮಕ್ಕಳು ಅತ್ತಾಗ ಮಾತ್ರ ತಾಯಿ ಹಾಲು ಕೊಡೋದು. ಆದರೆ, ತಮಿಳುನಾಡು ಕೇಳೋಕೆ ಮುಂಚೆ ನೀರು ಬಿಟ್ಟಿದ್ದಾರೆ ಎಂದು ಛೇಡಿಸಿದರು.
ಸ್ಟಾಲಿನ್ ಸ್ನೇಹಕ್ಕೆ ಕರ್ನಾಟಕ ಬಲಿ
‘ಇಂಡಿಯ’ಗೋಸ್ಕರ ನೀರು ಬಿಡಲಾಗಿದೆ. ಸ್ಟಾಲಿನ್ ಸ್ನೇಹಕ್ಕೆ ಕರ್ನಾಟಕ ಬಲಿಯಾಗಿದ್ದು, ಕಾಂಗ್ರೆಸ್ ಮಂಡ್ಯ ಜನರಿಗೆ ಶಾಪ, ತಮಿಳುನಾಡಿಗೆ ವರ. ನಿಮ್ಮ ಲಾಭಕ್ಕೆ ರಾಜ್ಯದ ಜನತೆಗೆ ನೀವು ಶಾಪ ಆಗಿದ್ದೀರಿ. ಸಂಕಷ್ಟದ ಸೂತ್ರ ಮರೆತು ನೀರು ಬಿಟ್ಟಿದ್ದೀರಿ. ಸಂಕಷ್ಟದ ಸೂತ್ರ ಬದಿಗೊತ್ತಿ ರಾಜಕೀಯ ಮಾಡ್ತಿದ್ದೀರಿ. ನಿಮ್ಮ ಪಾಪಕ್ಕೆ ಸೀಲ್ ಹಾಕಿಸಿಕೊಳ್ಳಲು ನಾಳೆ (ಬುಧವಾರ) ಸರ್ವಪಕ್ಷಗಳ ಸಭೆ ಮಾಡ್ತಿದ್ದೀರಿ ಎಂದು ಟೀಕಿಸಿದರು.