ನಿಮ್ಮನ್ನು ಭೇಟಿ ಮಾಡಲು ಇಚ್ಛಿಸುತ್ತೇವೆ: ದೆಹಲಿ ಸಿಎಂ ರೇಖಾ ಗುಪ್ತಾಗೆ ಪತ್ರ ಬರೆದ ಮಾಜಿ ಸಿಎಂ ಅತಿಶಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಮಾಜಿ ಸಿಎಂ ಅತಿಶಿ ಪತ್ರ ಬರೆದಿದ್ದು, ಮಹಿಳೆಯರಿಗೆ ತಿಂಗಳಿಗೆ 2,500 ರೂ. ಹಣ ನೀಡುವ ಗ್ಯಾರಂಟಿ ಯೋಜನೆ ಕುರಿತು ಚರ್ಚಿಸಲು ಭಾನುವಾರ ಸಮಯ ನೀಡುವಂತೆ ಕೋರಿದ್ದಾರೆ.

ಜೊತೆಗೆ ಬಿಜೆಪಿ ನೇತೃತ್ವದ ಸರ್ಕಾರ ತನ್ನ ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ಮಹಿಳೆಯರಿಗೆ ನೀಡಿದ್ದ ಆರ್ಥಿಕ ನೆರವು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮೊದಲಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ಬಿಜೆಪಿಯ ನಾಯಕ ಹಾಗೂ ದೇಶದ ಪ್ರಧಾನಿಯೂ ಆಗಿರುವ ನರೇಂದ್ರ ಮೋದಿ ಜಿ ಅವರು 2025ರ ಜ.31ರಂದು ದೆಹಲಿಯ ತಾಯಂದಿರು ಹಾಗೂ ಸಹೋದರಿಯರಿಗೆ ಭರವಸೆ ನೀಡಿದ್ದರು. ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ತಿಂಗಳಿಗೆ 2,500 ರೂ. ಆರ್ಥಿಕ ನೆರವು ಯೋಜನೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಅಲ್ಲದೇ ಇದು ಮೋದಿ ಜಿ ಭರವಸೆ ಎಂದು ಒತ್ತಿ ಹೇಳಿದ್ದರು. ದೆಹಲಿ ಸರ್ಕಾರ ಫೆ.20ರಂದು ತನ್ನ ಮೊದಲ ಕ್ಯಾಬಿನೆಟ್‌ ಸಭೆ ನಡೆಸಿತು. ಆದ್ರೆ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಇರಲಿಲ್ಲ. ದೆಹಲಿಯ ತಾಯಂದಿರು ಸಹೋದರಿಯರು ಮೋದಿ ಜೀ ಅವರ ಭರವಸೆ ನಂಬಿ ಮೋಸ ಹೋಗಿದ್ದಾರೆ. ಈ ಗ್ಯಾರಂಟಿ ಯೋಜನೆ ಸಂಬಂಧ ಚರ್ಚಿಸಲು ಎಎಪಿ ನಿಯೋಗ ಭಾನುವಾರ ನಿಮ್ಮನ್ನು ಭೇಟಿ ಮಾಡಲು ಇಚ್ಛಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದೇ ಫೆ.20ರಂದು ದೆಹಲಿಯ ನೂತನ ಸಿಎಂ ಆಗಿ ರೇಖಾ ಗುಪ್ತ ಪ್ರಮಾಣ ವಚನ ಸ್ವೀಕರಿಸಿದ್ದರು. ಜೊತೆಗೆ ಆರು ಇತರ ಶಾಸಕರು ಅವರ ಸಂಪುಟಕ್ಕೆ ಸೇರ್ಪಡೆಗೊಂಡರು. ಅದೇ ದಿನ ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ, ದೆಹಲಿ ಸರ್ಕಾರವು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!