ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಸಂಸತ್‌ನಲ್ಲಿ ಗುರುವಾರ (ಆಗಸ್ಟ್ 8) ವಿಧೇಯಕ ಮಂಡಿಸಲಿದೆ.
ಮಂಗಳವಾರ (ಆಗಸ್ಟ್ 6) ರಾತ್ರಿಯೇ ವಿಧೇಯಕದ ಪ್ರತಿಯನ್ನು ಲೋಕಸಭೆ ಸದಸ್ಯರಿಗೆ ಹಂಚಿಕೆ ಮಾಡಲಾಗಿದೆ.
ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವುದನ್ನು ಈಗಾಗಲೇ ಎಐಎಂಐಎಂ ಮುಖ್ಯಸ್ಥ ವಿರೋಧಿಸಿದ್ದಾರೆ.
ವಕ್ಫ್ ಕಾಯ್ದೆಗೆ ಏನೆಲ್ಲ ತಿದ್ದುಪಡಿ ತರಲಾಗುತ್ತದೆ? ಏನೆಲ್ಲ ಬದಲಾವಣೆ ಮಾಡಲಾಗುತ್ತದೆ? ಅಂತಾ ನೋಡಿದರೆ…
1995ರ ವಕ್ಫ್ ಕಾಯ್ದೆಯ ಸೆಕ್ಷನ್ 40ಕ್ಕೆ ತಿದ್ದುಪಡಿ ತಂದು ಹಲವು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದನ್ನು ‘ವಕ್ಫ್ ಕಾಯ್ದೆ’ ಎನ್ನುವ ಬದಲು ‘ಯುನಿಫೈಡ್ ವಕ್ಫ್ ಮ್ಯಾನೇಜ್‌ಮೆಂಟ್, ಎಫಿಶಿಯೆನ್ಸಿ & ಡೆವಲಪ್‌ಮೆಂಟ್ ಆಕ್ಟ್’ ಎಂಬುದಾಗಿ ಮರು ನಾಮಕರಣ ಮಾಡಲಾಗುತ್ತದೆ.
ಇನ್ನು, 1923ರಲ್ಲಿ ಜಾರಿಗೆ ತಂದ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸಲು ಕೂಡ ಕೇಂದ್ರ ಸರ್ಕಾರವು ಮತ್ತೊಂದು ವಿಧೇಯಕ ಮಂಡನೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏನೆಲ್ಲ ಬದಲಾವಣೆ?
ದೇಶದ ಯಾವುದೇ ಆಸ್ತಿಯನ್ನು ವಕ್ಫ್ ಮಂಡಳಿ ಆಸ್ತಿ ಎಂಬುದಾಗಿ ಘೋಷಿಸವ, ಅದನ್ನು ಯಾರೂ ಕೋರ್ಟ್‌ನಲ್ಲೂ ಪ್ರಶ್ನಿಸಲು ಸಾಧ್ಯವಾಗದಂತಹ ಪರಮಾಧಿಕಾರವನ್ನು ವಕ್ಫ್ ಕಾಯ್ದೆಯು ನೀಡಿದೆ. ಆದರೆ, ಈ ಪರಮಾಧಿಕಾರವನ್ನು ರದ್ದುಗೊಳಿಸುವುದು ಪ್ರಮುಖ ಬದಲಾವಣೆಯಾಗಿದೆ. ಇನ್ನು, ಆಯಾ ರಾಜ್ಯಗಳ ವಕ್ಫ್ ಮಂಡಳಿಗಳಲ್ಲಿ ಇಬ್ಬರು ಹೆಣ್ಣುಮಕ್ಕಳು ಕಡ್ಡಾಯವಾಗಿ ಇರುವುದು, ವಕ್ಫ್ ಮಂಡಳಿ ಆಸ್ತಿ ಕುರಿತು ಜಿಲ್ಲಾಧಿಕಾರಿ ತೀರ್ಮಾನ ತೆಗೆದುಕೊಳ್ಳುವುದು ಸೇರಿ ಹಲವು ಬದಲಾವಣೆ ಮಾಡಲಾಗುತ್ತದೆ.
ಸಮಿತಿಯಲ್ಲಿ ಒಬ್ಬ ಕೇಂದ್ರ ಸಚಿವ, ಮೂವರು ಸಂಸದರು, ಮೂರು ಮುಸ್ಲಿಂ ಸಂಘಟನೆಗಳ ಮುಖಂಡರು ಹಾಗೂ ಮೂವರು ಮುಸ್ಲಿಂ ಕಾನೂನು ತಜ್ಞರು ಇರಲಿದ್ದಾರೆ. ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ಇಬ್ಬರು ಜಡ್ಜ್‌ಗಳು ಸಮಿತಿಯ ಸದಸ್ಯರಾಗಿರುತ್ತಾರೆ. ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂಬುದಾಗಿ ಘೋಷಿಸುವ ಮೊದಲು ನೋಟಿಸ್ ನೀಡಬೇಕು. ಆ ಕುರಿತು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ವಕ್ಫ್ ಆಸ್ತಿಗಳ ಸರ್ವೇಯನ್ನು ಜಿಲ್ಲಾಧಿಕಾರಿ ಎದುರು ಮಾಡಬೇಕು. ಮಂಡಳಿಯ ನಿರ್ಧಾರ ಪ್ರಶ್ನಿಸಿ 90 ದಿನಗಳಲ್ಲಿ ಆಸ್ತಿಯ ಮಾಲೀಕರು ಅಥವಾ ಸಂಬಂಧಪಟ್ಟವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಅಧಿಕಾರ ನೀಡಲಾಗಿದೆ.
ಆಸ್ತಿಯ ಬದಲು ಹಣಕಾಸು ನೆರವು ಬಂದರೆ, ಆ ಹಣವನ್ನು ಕೇಂದ್ರ ಸರ್ಕಾರ ಸಲಹೆಯಂತೆ ವಿಧವೆಯರು, ವಿಚ್ಛೇದನ ಪಡೆದವರು ಹಾಗೂ ಅನಾಥರ ಕಲ್ಯಾಣಕ್ಕೆ ವಿನಿಯೋಗಿಸಬೇಕು. ವಕ್ಫ್ ಮಂಡಳಿಯನ್ನು ವಿರೋಧಿಸುತ್ತಿರುವ ಬೋಹ್ರಾ ಹಾಗೂ ಆಗಾಖಾನಿ ಸಮುದಾಯದವರಿಗೆ ಪ್ರತ್ಯೇಕ ಮಂಡಳಿಸಲು ಪ್ರಸ್ತಾಪಿಸಲಾಗಿದೆ.
ಏನಿದು ವಕ್ಫ್ ಕಾಯ್ದೆ?
1995ರಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಕಾರಣಕ್ಕಾಗಿ ದಾನವಾಗಿ ನೀಡಿದ ಭೂಮಿಯನ್ನು ನಿಯಂತ್ರಿಸುವ ದಿಸೆಯಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದಕ್ಕೆ ಮುಸ್ಲಿಂ ಕಾನೂನನ್ನು ಕೂಡ ಅನ್ವಯ ಮಾಡಲಾಗಿದೆ. ಧಾರ್ಮಿಕ ಕಾರಣಕ್ಕಾಗಿ ನೀಡಿದ ಆಸ್ತಿಯು ವಕ್ಫ್ ಮಂಡಳಿ ವ್ಯಾಪ್ತಿಗೆ ಬರುತ್ತದೆ. ಯಾವುದೇ ಆಸ್ತಿಯನ್ನು ವಕ್ಫ್ ಮಂಡಳಿಯು ತನ್ನ ಆಸ್ತಿಯನ್ನು ಘೋಷಿಸುವ ಜತೆಗೆ ಅದನ್ನು ವಶಕ್ಕೆ ಪಡೆಯುವ ಪರಮಾಧಿಕಾರ ಹೊಂದಿದೆ.
ದೇಶದಲ್ಲಿ ವಕ್ಫ್ ಮಂಡಳಿಯು ಸುಮಾರು 8.7 ಲಕ್ಷ ಆಸ್ತಿಗಳನ್ನು ಹೊಂದಿದೆ. ಇದರ ವ್ಯಾಪ್ತಿಯು ಸುಮಾರು 9.4 ಲಕ್ಷ ಎಕರೆ ಆಗಿದೆ. 2022ರಲ್ಲಿ ಹಿಂದುಗಳೇ ಬಹುಸಂಖ್ಯಾತರಾಗಿರುವ ತಮಿಳುನಾಡಿನ ತಿರುಚೆಂದುರೈ ಎಂಬ ಹಳ್ಳಿಯನ್ನು ವಕ್ಫ್ ಬೋರ್ಡ್ ತಮ್ಮದು ಎಂದು ಘೋಷಿಸಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇನ್ನು, ಕಳೆದ ವರ್ಷ, ದೆಹಲಿ ವಕ್ಫ್ ಬೋರ್ಡ್ ಮಂಡಳಿಯ ಅಧೀನದಲ್ಲಿರುವ 123 ಆಸ್ತಿಗಳ ಪರಿಶೀಲನೆಗೆ ದೆಹಲಿ ಹೈಕೋರ್ಟ್ ಆದೇಶಿಸಿತ್ತು. ವಕ್ಫ್ ಮಂಡಳಿಯು ಇಂತಹ ವಿವಾದಿತ ಆಸ್ತಿಗಳನ್ನೇ ತುಂಬ ಹೊಂದಿದೆ. ಇಸ್ಲಾಂನಲ್ಲಿರುವ ಕೆಲ ಉಪ ಪಂಗಡಗಳೇ ವಕ್ಫ್ ಮಂಡಳಿಯನ್ನು ವಿರೋಧಿಸುತ್ತಿವೆ.