ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ಜಿಲ್ಲೆಯ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಮಿತಿಯೊಂದನ್ನು ರಚಿಸಿ, 1964 ರಿಂದ 1974ರ ವರೆಗಿನ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಸೂಚಿಸಿದ್ದಾರೆ.
ನಗರದ ಸೋಲಾಪುರ ರಸ್ತೆಯಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಜಿಲ್ಲೆಯ ವಿವಿಧ ತಹಶೀಲ್ದಾರರು, ವಕ್ಫ್ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದರು. ಬಳಿಕ ಮಾತನಾಡಿದ ಎಂ.ಬಿ ಪಾಟೀಲ್, ವಿಜಯಪುರಜಿಲ್ಲೆಯಾದ್ಯಂತ ರೈತರು ಸೇರಿದಂತೆ ಖಾಸಗಿ ಜಮೀನುಗಳ ಪೈಕಿ ಒಂದು ಎಕರೆಯೂ ಸಹ ವಕ್ಫ್‌ಗೆ ಸೇರಿಸಿಲ್ಲ. 1974ರ ಗೆಜೆಟ್ ನೋಟಿಫಿಕೇಶನ್ ಪ್ರಕಾರ ವಕ್ಫ್ ಆಸ್ತಿ ಮಾತ್ರ ಇಂದೀಕರಣ ಮಾಡಲಾಗುತ್ತಿದ್ದು, ಈ ಕುರಿತು ಅನವಶ್ಯಕವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ. ಎಲ್ಲ ಗೊಂದಲಕ್ಕೆ ಅಂತ್ಯ ಹಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಸಮಿತಿ ರಚಿಸಿಕೊಂಡು 1964 ರಿಂದ 1974ರ ವರೆಗಿನ ದಾಖಲೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
1974ರಲ್ಲಿ ಹೊರಡಿಸಲಾದ ಗೆಜೆಟ್ ನೋಟಿಫಿಕೇಶನ್‍ನಲ್ಲಿ ನಗರದಲ್ಲಿರುವ ಖಾಜಾ ಅಮೀನ ದರ್ಗಾ ಸರ್ವೇ ನಂಬರ್ ಹೊನವಾಡ ಗ್ರಾಮದ ಆಸ್ತಿ ಎಂದು ನಮೂದಾಗಿರುವುದರಿಂದ ವಕ್ಫ್ ಮಂಡಳಿಯಿಂದ ಮತ್ತೇ 1977ರಲ್ಲಿ ಮತ್ತೆ ಬದಲಾವಣೆ ಮಾಡಿ ಸರಿಪಡಿಸಲಾಗಿದೆ. ಹೊನವಾಡ ಗ್ರಾಮದ ಯಾರಿಗೂ ನೋಟಿಸ್ ಈವರೆಗೆ ಜಾರಿ ಮಾಡಿರುವುದಿಲ್ಲ, ಸಂಬಂಧಿಸಿದ ರೈತರ-ಮಾಲೀಕರ ಹೆಸರಿನಲ್ಲಿಯೇ ಜಮೀನುಗಳು ಇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಗೆಜೆಟ್ ನೋಟಿಫಿಕೇಶನ್‍ಗಿಂತ ಮುಂಚಿತವಾಗಿ 1964 ರಿಂದ 1974ರ ವರೆಗಿನ ದಾಖಲೆಗಳನ್ನು ಪರಿಶೀಲಿಸಿ ಸರಿಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.