ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಪ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ, ವಕ್ಫ್ ತಿದ್ದುಪಡಿ ಕಾಯ್ದೆ – 2024 ರ ಜಂಟಿ ಸದನ ಸಮಿತಿ ಅಧ್ಯಕ್ಷರಾದ ಜಗದಾಂಬಿಕಾ ಪಾಲ್ ಅವರು ಶುಕ್ರವಾರ ಸುಮಾರು ರಾಜ್ಯದಲ್ಲಿ 500 ಅಹವಾಲುಗಳನ್ನು ಆಲಿಸಿದರು.
ಹುಬ್ಬಳ್ಳಿ, ವಿಜಯಪುರ ಮತ್ತು ಬೆಳಗಾವಿಗೆ ಭೇಟಿ ನೀಡಿದ ಪಾಲ್, ರೈತರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಸದಸ್ಯರನ್ನು ಭೇಟಿ ಮಾಡುವ ಮೂಲಕ ವಕ್ಫ್ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಅಹವಾಲು ಸ್ವೀಕರಿಸಿದರು.
ಈ ವೇಳೆ ತಮ್ಮ ಭೂಮಿಯನ್ನು ವಕ್ಫ್ ಮಂಡಳಿ ಆಸ್ತಿ ಎಂದು ಹೇಳಲಾಗುತ್ತಿದೆ ಎಂದು ವಿಜಯಪುರ, ಬೀದರ್, ಕಲಬುರಗಿ, ಹುಬ್ಬಳ್ಳಿ, ಬಾಗಲಕೋಟೆ ಮತ್ತು ಬೆಳಗಾವಿಯ ರೈತರಿಂದ ಸುಮಾರು 500 ಅಹವಾಲುಗಳನ್ನು ಜಗದಾಂಬಿಕಾ ಪಾಲ್ ಸ್ವೀಕರಿಸಿದರು ಎಂದು ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸತ್ಯ ಶೋಧನೆ ಮತ್ತು ನೊಂದವರನ್ನು ಭೇಟಿ ಮಾಡಲು ರಾಜ್ಯಕ್ಕೆ ಭೇಟಿ ನೀಡಿದ್ದೇನೆ. ರೈತರು ಹಾಗೂ ವಿವಿಧ ಸಂಘಟನೆಗಳಿಂದ ಸಂಬಂಧಿಸಿದ ದಾಖಲೆಗಳು, ಮನವಿ ಪತ್ರಗಳನ್ನು ಸ್ವೀಕರಿಸಿದ್ದು, ಅವೆಲ್ಲವನ್ನೂ ಜಂಟಿ ಸಂಸದೀಯ ಸಮಿತಿಯಲ್ಲಿ ಚರ್ಚಿಸಿ ವರದಿಯಲ್ಲಿ ಸೇರಿಸಲಾಗುವುದು ಎಂದು ಜಗದಾಂಬಿಕಾ ಪಾಲ್ ಭರವಸೆ ನೀಡಿದರು.
ರೈತರ ಭೂಮಿ ತೆರವುಗೊಳಿಸದಂತೆ ರಾಜ್ಯ ಸರಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಸಮಸ್ಯೆ ಬಗೆಹರಿಯುವುದೇ? ದಾಖಲೆ ತಿದ್ದುವಿಕೆ, ಮ್ಯುಟೇಶನ್, ವಕ್ಫ್ ದಾಖಲೆ ಬದಲಾವಣೆ ಮಾಡಿರುವುದು ಖಾತ್ರಿಯಾಗಿದೆ. ರಾಜ್ಯ ಸರಕಾರ ಏನು ಮಾಡುತ್ತಿದೆ. ಇದಕ್ಕೆ ಯಾರು ಹೊಣೆ? ಎಂದು ಅವರು ಪ್ರಶ್ನಿಸಿದರು.
ವಿಜಯಪುರದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಗದಾಂಬಿಕಾ ಪಾಲ್, ಪಾಲ್, ವಕ್ಫ್ ಅದಾಲತ್ ನಡೆಸಿ, ವಕ್ಫ್ ಆಸ್ತಿ ಎಂದು ನಿರ್ಧರಿಸಲು ‘‘ಪಾರದರ್ಶಕ ವಕ್ಫ್ ಕಾನೂನು ಜಾರಿಗೆ ಬರುತ್ತಿರುವಾಗ ಇದನ್ನು ಮಾಡುವ ಆತುರವೇನಿತು? ರೈತರು, ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದ್ದು, ಇಂತಹ ಘಟನೆಗಳು ರಾಜ್ಯದಲ್ಲಿ ಏಕೆ ನಡೆದಿದೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಉತ್ತರ ನೀಡಬೇಕಾಗಿದೆ ಎಂದರು.
1920 ಮತ್ತು 1930ರಿಂದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಾನೂನು ಜಾರಿಯಾಗುವ ಮುನ್ನವೇ ನೋಟಿಸ್ ನೀಡುತ್ತಿರುವುದು ಏಕೆ? ನೋಟಿಸ್ ನೀಡುವುದರ ಜೊತೆಗೆ ಆರ್‌ಟಿಸಿ,ಪಹಣಿ ಮತ್ತು ಮ್ಯುಟೇಶನ್ ರಿಜಿಸ್ಟರ್‌ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರೈತರು ಹೇಳಿಕೊಂಡಿದ್ದಾರೆ. ಕರ್ನಾಟಕ ವಕ್ಫ್ ಮಂಡಳಿಯು ರಾಜ್ಯಾದ್ಯಂತ ಕನಿಷ್ಠ 53 ಐತಿಹಾಸಿಕ ಪುರಾತತ್ವ ಸಮೀಕ್ಷೆ ಸಂರಕ್ಷಿತ ಸ್ಥಳಗಳನ್ನು ಕೂಡಾ ತಮ್ಮ ಆಸ್ತಿ ಎಂದು ಹೇಳಿಕೊಂಡಿದೆ. ಇದು ವಕ್ಫ್ ಆಸ್ತಿ ಹೇಗೆ? ಎಂದು ಪ್ರಶ್ನಿಸಿದರು.