ಹೊಸದಿಗಂತ ವರದಿ, ಮಂಗಳೂರು:
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕರ್ನಾಟಕ ಉಲಾಮಾ ಒಕ್ಕೂಟದ ನೇತೃತ್ವದಲ್ಲಿ ಮಂಗಳೂರಿನ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ ಶುಕ್ರವಾರ ಪ್ರತಿಭಟನಾ ಸಮಾವೇಶ ನಡೆಯಿತು.
ದಕ್ಷಿಣ ಕನ್ನಡ ಮತ್ತು ಉಡುಪಿಯ ಖಾಜಿಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಂದ ಜನ ಭಾಗವಹಿಸಿದ್ದರು. ಉಲೇಮಾ ಸಮನ್ವಯ ಸಮಿತಿಯ ಪದಾಧಿಕಾರಿಗಳು ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹೆದ್ದಾರಿ ಅಘೋಷಿತ ‘ಬಂದ್’
ಪ್ರತಿಭಟನೆಯ ಹೆಸರಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡದಂತೆ ಕರ್ನಾಟಕ ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿತ್ತಾದರೂ ಶುಕ್ರವಾರ ಹೆದ್ದಾರಿಯ ವಾಹನ ಸಂಚಾರ ಮಾತ್ರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಹೈಕೋರ್ಟ್ ಸ್ಪಷ್ಟ ಆದೇಶವಿದ್ದರೂ ಒಕ್ಕೂಟ ಈ ಆದೇಶವನ್ನೇ ಉಲ್ಲಂಘಿಸಿ ಹೆದ್ದಾರಿ ‘ಬಂದ್’ ಮಾಡಿ ಪ್ರತಿಭಟನೆ ನಡೆಸಿದ್ದು, ಹೈ ಕೋರ್ಟ್ ಆದೇಶಕ್ಕೆ ಯಾವುದೇ ಬೆಲೆ ಇಲ್ಲವೇ? ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಶುಕ್ರವಾರ ಮಂಗಳೂರು ನಗರಕ್ಕೆ ತಲುಪಬೇಕಾದವರು, ಮಂಗಳೂರಿನಿಂದ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೆ ತೆರಳಬೇಕಾದವರು ತಾಸುಗಟ್ಟಲೆ ಟ್ರಾಫಿಕ್ ಜಾಮ್‌ಗೆ ಸಿಲುಕಿ ತತ್ತರಿಸಿದರು. ಆಂಬ್ಯುಲೆನ್ಸ್‌ಗಳು ಕೂಡಾ ತಾಸುಗಟ್ಟಲೆ ಪರದಾಟ ನಡೆಸಬೇಕಾಯಿತು. ಪೊಲೀಸರು ಕೂಡ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಬದಲಾಗಿ ಅಲ್ಲಿ ಹೋಗಿ, ಇಲ್ಲಿ ಹೋಗಿ ದಬಾಯಿಸಿ ಕಳುಹಿಸುತ್ತಿದ್ದುದು ಎಲ್ಲೆಡೆ ಕಂಡುಬಂತು. ತುರ್ತು ಕಾರಣಗಳಿಗಾಗಿ ಮಂಗಳೂರು ತಲುಪಬೇಕಾದವರು ಕೂಡ ಭಾರೀ ತ್ರಾಸಪಟ್ಟರು.
ಗುರುವಾರವಷ್ಟೇ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಉಚ್ಛ ನ್ಯಾಯಾಲಯ ಪೀಠವು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಬಾರದು ಎಂದು ಸ್ಪಷ್ಟ ಆದೇಶ ನೀಡಿತ್ತು. ಇದರ ಅರಿವಿದ್ದರೂ ಪೊಲೀಸ್ ಇಲಾಖೆ ಹೆದ್ದಾರಿ ಬಂದ್‌ಗೆ ಅವಕಾಶ ಕಲ್ಪಿಸಿರುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ .