ಅಮಿತ್‌ ಶಾ ನೇತೃತ್ವದಲ್ಲಿ ಡ್ರಗ್ಸ್‌ ವಿರುದ್ಧ ಸಮರ: 2,381 ಕೋಟಿ ಮೌಲ್ಯದ 1.44 ಲಕ್ಷ ಕೆಜಿ ಮಾದಕವಸ್ತು ನಾಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ವಿವಿಧ ಭಾಗಗಳಲ್ಲಿ ಇಂದು 2,381 ಕೋಟಿ ರೂಪಾಯಿ ಮೌಲ್ಯದ 1.44 ಲಕ್ಷ ಕೆಜಿ ಮಾದಕವಸ್ತುಗಳನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ಅಮಿತ್‌ ಶಾ ನೇತೃತ್ವದಲ್ಲಿ ‘ಮಾದಕವಸ್ತು ಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ’ ಕುರಿತ ಪ್ರಾದೇಶಿಕ ಸಭೆ ನಡೆಸಿದರು. ಇದೇ ವೇಳೆ ಅವರು ದೇಶಾದ್ಯಂತ 1.44 ಲಕ್ಷ ಕೆ.ಜಿ ಮಾದಕವಸ್ತು ನಾಶಪಡಿಸುವುದನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ವೀಕ್ಷಿಸಿದರು.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಹೈದರಾಬಾದ್ ಘಟಕವು ವಶಪಡಿಸಿಕೊಂಡ 6,590 ಕೆಜಿ, ಇಂದೋರ್ ಘಟಕದಿಂದ 822 ಕೆಜಿ ಮತ್ತು ಜಮ್ಮು ಘಟಕದಿಂದ ವಶ ಪಡಿಸಿಕೊಂಡ 356 ಕೆಜಿ ಮಾದಕವಸ್ತುಗಳನ್ನು ನಾಶ ಮಾಡಲಾಗಿದೆ.

ಅದೇ ರೀತಿ ವಿವಿಧ ರಾಜ್ಯಗಳ ವಿವಿಧ ಕಾನೂನು ಜಾರಿ ಸಂಸ್ಥೆಗಳು ವಶಪಡಿಸಿಕೊಂಡಿರುವ ಮಾದಕ ದ್ರವ್ಯಗಳನ್ನು ನಾಶಪಡಿಸಿವೆ.

ಮಧ್ಯಪ್ರದೇಶದಲ್ಲಿ 1,03,884 (1.03 ಲಕ್ಷ) ಕೆಜಿ, ಅಸ್ಸಾಂನಲ್ಲಿ 1,486 ಕೆಜಿ, ಚಂಡೀಗಢದಲ್ಲಿ 229 ಕೆಜಿ, ಗೋವಾದಲ್ಲಿ 25 ಕೆಜಿ, ಗುಜರಾತ್‌ನಲ್ಲಿ 4,277 ಕೆಜಿ, ಹರ್ಯಾಣದಲ್ಲಿ 2,458 ಕೆಜಿ, ಜಮ್ಮು ಮತ್ತು ಕಾಶ್ಮೀರದಲ್ಲಿ 4,069 ಕೆಜಿ, ಮಹಾರಾಷ್ಟ್ರದಲ್ಲಿ 159 ಕೆಜಿ, ತ್ರಿಪುರಾದಲ್ಲಿ 1,803 ಕೆಜಿ ಮತ್ತು ಉತ್ತರ ಪ್ರದೇಶದಲ್ಲಿ 4,049 ಕೆಜಿ ಡ್ರಗ್ಸ್ ಸುಡಲಾಗಿದೆ.

ಈ ಕುರಿತು ಸರ್ಕಾರ ಪ್ರಕಟಣೆ ಹೊರಡಿಸಿದ್ದು, ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ಮಾದಕವಸ್ತು ಮುಕ್ತಗೊಳಿಸಲು ತೀರ್ಮಾನಿಸಿದೆ. ಅದರಂತೆ, ಸಾವಿರಾರು ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡು, ಅದನ್ನು ನಾಶಪಡಿಸಲಾಗಿದೆ. 2022ರ ಜೂನ್‌ 1ರಿಂದ 2023ರ ಜುಲೈ ಅವಧಿಯಲ್ಲಿ ಎನ್‌ಸಿಬಿಯ ಪ್ರಾದೇಶಿಕ ಘಟಕಗಳು ವಶಪಡಿಸಿಕೊಂಡ 8.76 ಲಕ್ಷ ಕೆ.ಜಿ ಅಂದರೆ, 9,580 ಕೋಟಿ ರೂ. ಮೌಲ್ಯದ ಡ್ರಗ್ಸ್‌ಅನ್ನು ನಾಶಪಡಿಸಲಾಗಿದೆ. ಇದು ನಿಗದಿತ ಗುರಿಗಿಂತ 11 ಪಟ್ಟು ಕಡಿಮೆಯಾಗಿದೆ’ ಎಂದು ತಿಳಿಸಿದೆ.

ದೇಶಾದ್ಯಂತ ಒಂದು ವರ್ಷದಲ್ಲಿ 10 ಲಕ್ಷ ಕೆ.ಜಿ ಮಾದಕವಸ್ತುವನ್ನು ನಾಶಪಡಿಸಲಾಗಿದೆ. ಇದರ ಒಟ್ಟು ಮೌಲ್ಯವು 12 ಸಾವಿರ ಕೋಟಿ ರೂ. ಆಗಿದೆ. ಇದೇ ರೀತಿ ಮುಂದಿನ ದಿನಗಳಲ್ಲೂ ಡ್ರಗ್ಸ್‌ ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ಮಾಹಿತಿ ನೀಡಿದೆ. ‘ದೇಶವನ್ನು ಮಾದಕವಸ್ತು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಪಣತೊಟ್ಟಿದೆ. ಅದರಂತೆ ಮುಂದಿನ ದಿನಗಳಲ್ಲೂ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಅಮಿತ್‌ ಶಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!