ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ಧರಿಸಿದ ಮಹಿಳೆ ಒಂದು ದಿನ ಭಾರತದ ಪ್ರಧಾನಿಯಾಗುತ್ತಾರೆ ಎಂಬ ಹೇಳಿಕೆ ಕುರಿತು ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಹಿಮಂತಾ ಬಿಸ್ವಾ ಶರ್ಮಾ ನಡುವಿನ ಭಾನುವಾರ ವಾಕ್ ಸಮರ ನಡೆದಿದೆ.
ನಾಗ್ಪುರದಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, ಶರ್ಮಾ ಅವರಂತಹವರು ಸಂವಿಧಾನದ ಸ್ಫೂರ್ತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಭಾರತವು ಯಾವುದೇ ಒಂದು ಧರ್ಮ ಅಥವಾ ಸಮುದಾಯಕ್ಕೆ ಸೇರಿಲ್ಲ. ಇದು ರಾಷ್ಟ್ರದ ಸೌಂದರ್ಯವಾಗಿದೆ ಎಂದು ಹೇಳಿದರು.
ಹಿಮಂತಾ ಬಿಸ್ವಾ ಶರ್ಮಾ ತಲೆಯಲ್ಲಿ ಟ್ಯೂಬ್ ಲೈಟ್ ಇದೆ. ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಅದರಲ್ಲಿ ಏನು ಬರೆಯಲಾಗಿದೆ ಎಂದು ಅವರಿಗೆ ತಿಳಿದಿದೆಯೇ? ಎಂದು ಪ್ರಶ್ನಿಸಿದರು.
ಹಿಮಂತ ಬಿಸ್ವಾ ಶರ್ಮಾ ಅವರು ಪಾಕಿಸ್ತಾನದ ಮನಸ್ಥಿತಿಯನ್ನು ಹೊಂದಿದ್ದಾರೆ. ಪಾಕಿಸ್ತಾನದ ಸಂವಿಧಾನದಲ್ಲಿ, ಒಂದು ಸಮುದಾಯದ ಯಾರಾದರೂ ಮಾತ್ರ ದೇಶದ ಪ್ರಧಾನಿ ಅಥವಾ ಅಧ್ಯಕ್ಷರಾಗಬಹುದು ಎಂದಿದೆ. ಆದರೆ, ಭಾರತದಲ್ಲಿ ದೇವರಲ್ಲಿ ನಂಬಿಕೆಯಿಲ್ಲದವರಿಗೂ ಸ್ಥಾನವಿದೆ. ಶರ್ಮಾ ಅವರದು ಸಂಕುಚಿತ ಮನೋಭಾವವಾಗಿದ್ದು, ಚಿಕ್ಕ ವಿಚಾರವನ್ನು ದೊಡ್ಡದು ಮಾಡುತ್ತಾರೆ ಎಂದು ಕಿಡಿಕಾರಿದರು.
ಏನಿದು ವಿವಾದ?
ಹಿಜಾಬ್ ಧರಿಸಿದ ಮಹಿಳೆ ಒಂದು ದಿನ ಭಾರತದ ಪ್ರಧಾನಿಯಾಗುತ್ತಾರೆ ಎಂದು ಓವೈಸಿ ಶನಿವಾರ ಹೇಳಿದ್ದರು. ನಂತರ ಶರ್ಮಾ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಭಾರತ ಹಿಂದು ನಾಗರಿಕತೆಯನ್ನು ಹೊಂದಿರುವ ಹಿಂದು ರಾಷ್ಟ್ರವಾಗಿದೆ ಮತ್ತು ಭಾರತದ ಪ್ರಧಾನಿ ಯಾವಾಗಲೂ ಹಿಂದು ಆಗಿರುತ್ತಾರೆ ಎಂದು ನಾವು ಬಲವಾಗಿ ನಂಬುತ್ತೇವೆ ಎಂದು ಹೇಳಿದ್ದರು.

