ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಲ್ಲಿ ವಕ್ಫ್ ಮಸೂದೆಗೆ ಸಂಬಂಧಿಸಿ BJP ಮತ್ತು TMC ನಾಯಕರ ನಡುವೆ ಜಟಾಪಟಿ ನಡೆದಿದ್ದು , ಈ ವೇಳೆ ಟಿಎಂಸಿ ನಾಯಕ ಗಾಜಿನ ಬಾಟಲಿ ಹೊಡೆದು ಕೈಗೆ ಗಾಯ ಮಾಡಿಕೊಂಡ ಘಟನೆ ನಡೆದಿದೆ.
ಕೇಂದ್ರ ಸರ್ಕಾರದ ವಕ್ಫ್ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ, ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರು ಕೋಪದಿಂದ ಗಾಜಿನ ನೀರಿನ ಬಾಟಲಿ ಹೊಡೆದಿದ್ದು ಈ ವೇಳೆ ಅವರ ಕೈ ಬೆರಳುಗಳಿಗೆ ಗಾಯವಾಗಿದೆ. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಮತ್ತು ಪಶ್ಚಿಮ ಬಂಗಾಳದ ಶ್ರೀರಾಮಪುರ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ಅಭಿಜಿತ್ ಗಂಗೋಪಾಧ್ಯಾಯ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ಸಂದರ್ಭ ಕಲ್ಯಾಣ್ ಬ್ಯಾನರ್ಜಿ ಕೋಪದಿಂದ ಗಾಜಿನ ನೀರಿನ ಬಾಟಲಿಯನ್ನು ಒಡೆದರು. ಇದರಿಂದ ಅವರ ಹೆಬ್ಬೆರಳು ಮತ್ತು ತೋರು ಬೆರಳಿಗೆ ಗಾಯವಾಯಿತು. ನಂತರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಸಾದುದ್ದೀನ್ ಓವೈಸಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂಜಯ್ ಸಿಂಗ್ ಅವರನ್ನು ಸಭೆಯಿಂದ ಹೊರಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದರು ಎನ್ನಲಾಗಿದೆ.
ಬಿಜೆಪಿ ಸಂಸದರಾದ ಜಗದಾಂಬಿಕಾ ಪಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಚರ್ಚೆಯ ವೇಳೆ ಕಲ್ಯಾಣ್ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ಅಭಿಜಿತ್ ಗಂಗೋಪಾಧ್ಯಾಯ ನಡುವೆ ತೀವ್ರ ವಾಗ್ವಾದ ನಡೆಯಿತು, ನಂತರ ಪರಿಸ್ಥಿತಿ ಹದಗೆಟ್ಟಿತು. ವಕ್ಫ್ ಮಸೂದೆ ಮೇಲಿನ ಚರ್ಚೆಯ ವೇಳೆ ಕೆಲವು ಪ್ರತಿಪಕ್ಷ ಸದಸ್ಯರು ನಿವೃತ್ತ ನ್ಯಾಯಮೂರ್ತಿಗಳು ಮತ್ತು ವಕೀಲರ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇನ್ನು ಕಲ್ಯಾಣ್ ಬ್ಯಾನರ್ಜಿ ಅವರ ಈ ಅಶಿಸ್ತಿನ ವರ್ತನೆಗಾಗಿ ಅವರನ್ನು ವಕ್ಫ್ ಮಸೂದೆಯ ಜೆಪಿಸಿಯಿಂದ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.
ಇನ್ನು ವಕ್ಫ್ ಮಸೂದೆಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ಪ್ರತಿಪಕ್ಷಗಳ ಸದಸ್ಯರು ಮಸೂದೆಯ ಸಮಾಲೋಚನೆ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರೆ, ಬಿಜೆಪಿ ಸಂಸದರು ಮಸೂದೆಯನ್ನು ಸಮರ್ಥಿಸಿಕೊಂಡರು. ರಾಜಕೀಯ ಕಾರಣಗಳಿಗಾಗಿ ಈ ಮಸೂದೆಯನ್ನು ತರಲಾಗುತ್ತಿದೆ ಮತ್ತು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವ ಗುರಿ ಹೊಂದಿದೆ ಎಂದು ಪ್ರತಿಪಕ್ಷದ ಕೆಲವು ಸದಸ್ಯರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮಸೂದೆ ತರುವ ‘ತರಾತುರಿ’ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು.