Wednesday, August 10, 2022

Latest Posts

ವರದಾ ಇಂಡಸ್ಟ್ರೀಯಲ್ಲಿ ವಿದ್ಯುತ್ ಅವಘಡ: ಲಕ್ಷಾಂತರ ಹಾನಿ

ಹೊಸ ದಿಗಂತ ವರದಿ, ಹಾವೇರಿ:

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಜಿಲ್ಲೆಯ ಹಾನಗಲ್ಲ ತಾಲೂಕಿನ ಕೂಸನೂರು ಗ್ರಾಮದ ವರದಾ ಇಂಡಸ್ಟ್ರೀಯಲ್ಲಿನ ಯಂತ್ರೋಪಕರಣಗಳು ಹಾಗೂ ಉತ್ಪಾದಿಸಿಟ್ಟಿದ್ದ ವಸ್ತುಗಳು ಸೇರಿ ಒಟ್ಟು ೪೦ ಲಕ್ಷಕ್ಕೂ ಅಧಿಕ ಮೊತ್ತದ ವಸ್ತುಗಳು ಹಾನಿಗೊಳಗಾಗಿವೆ.
ವರದಾ ಇಂಡಸ್ಟ್ರೀಯಲ್ಲಿ ಅಡಿಕೆ ಎಲೆಯಿಂದ ಊಟದ ತಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಹಾಗೂ ಬೇಲಿಗೆ ಹಾಕಲಾಗುವ ಮುಳ್ಳಿನ ತಂತಿಯನ್ನು ತಯಾರಿಸಲಾಗುತ್ತಿತ್ತು. ಅಡಕೆ ತಟ್ಟೆಗಳ ತಯಾರಿಸುವ 4 ಯಂತ್ರಗಳು, ಮುಳ್ಳು ತಂತಿ ತಯಾರಿಕೆಯ ಒಂದು ಯಂತ್ರ, ಪ್ರೆಶರ್ ಮಷಿನ್, ಸ್ಲಬ್ಬಿಂಗ್ ಮಷಿನ್ ಸೇರಿದಂತೆ ಇತರೆ ಸಣ್ಣ-ಪುಟ್ಟ ಯಂತ್ರೋಪಕರಣಗಳು ಸೇರಿದಂತೆ ಮಾರಾಟಕ್ಕೆ ಸಿದ್ದ ಪಡಿಸಿದ್ದ ಅಡಕೆತಟ್ಟೆಗಳು ಹಾಗೂ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಈ ಘಟನೆ ಗುರುವಾರ ತಡ ರಾತ್ರಿ ಸಂಭವಿಸಿದೆ. ಎಂದಿನಂತೆ ಗುರುವಾರ ಹಗಲು ಹೊತ್ತಿನಲ್ಲಿ ಕೈಗಾರಿಕೆಯಲ್ಲಿ ವರದಾ ಇಂಡಸ್ಟ್ರೀಯ ಮಾಲೀಕ ಪ್ರವೀಣ ಪೂಜಾರ ಹಾಗೂ ಕಾರ್ಮಿಕರು ಅಡಿಕೆ ತಟ್ಟೆ ಹಾಗೂ ಮುಳ್ಳು ತಂತಿ ತಯಾರಿಸಿ ದಿನನಿತ್ಯದಂತೆ ರಾತ್ರಿ ಸಮಯದಲ್ಲಿ ಮನೆಗೆ ತೆರಳಿದ್ದರು.
ಆದರೆ ತಯಾರಿಕಾ ಘಟಕಕ್ಕೆ ಬೆಂಕಿ ಬಿದ್ದಿದೆ ಎಂದು ಇವರಿಗೆ ರಾತ್ರಿ 3 ಗಂಟೆ ಸಮಯದಲ್ಲಿ ತಿಳಿದಿದೆ. ಈ ಸಮಯದಲ್ಲಾಗಲೇ ತಯಾರಿಕಾ ಘಟಕದಲ್ಲಿನ ಯಂತ್ರೋಪಕರಣಗಳು, ತಯಾರಿಸಿದ್ದ ವಸ್ತುಗಳುಗಳು ಸೇರಿ ಶೆಡ್ ಸಹಿತ ಬಹುತೇಕ ಬೆಂಕಿಗಾಹುತಿಯಾಗಿದೆ. ಹಾನಗಲ್ಲದಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಾ ಇಂಡಸ್ಟ್ರೀಯ ಮಾಲೀಕರಾಗಿದ್ದ ಪ್ರವೀಣ ಪೂಜಾರ ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಧರರಾಗಿದ್ದರು. ಕೆಲ ದಿನಗಳ ಕಾಲ ಕೆಲ ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ತಮ್ಮ ಸ್ವಂತ ಗ್ರಾಮ ಕೂಸನೂರಲ್ಲಿ ಪ್ರಾರಂಭದಲ್ಲಿ ಬ್ಯಾಂಕ್ ಸಾಳವನ್ನು ಪಡೆದುಕೊಂಡು ಅಡಿಕೆ ಎಲೆಯಿಂದ ತಟ್ಟೆ ಸೇರಿದಂತೆ ಔತಣ ಕೂಟಗಳಿಗೆ ಬೇಕಾದ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದ್ದರು. ನಂತರ ಮುಳ್ಳಿನ ತಂತಿ ತಯಾರಿಕಾ ಘಟಕವನ್ನು ಪ್ರಾರಂಭಿಸಿ ಚಿಕ್ಕದಾದ ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಹಂತ ಹಂತವಾಗಿ ಬೆಳೆಯುತ್ತಿದ್ದರು. ಆದರೆ ಗುರುವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಅವರ ಕನಸು ಕಮರಿದಂತೆ ಅವರು ಕಂಡುಬಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss