ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಭದ್ರತಾ ಲೋಪದ ಕಾಣಿಸಿಕೊಂಡ ಬೆನ್ನಲ್ಲೇ ಸಂಸತ್ತಿನ ಭದ್ರತಾ ವ್ಯವಸ್ಥೆಯತ್ತ ಇಲಾಖೆ ಗಮನಹರಿಸಿದ್ದು, ಪ್ರವೇಶದ್ವಾರದಲ್ಲಿ ಬಾಡಿ ಸ್ಕ್ಯಾನರ್ ಅಳವಡಿಸಲಾಗುತ್ತದೆ ಎಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸ್ಪೀಕರ್ ಓಂ ಬಿರ್ಲಾ ಸರ್ವಪಕ್ಷಗಳ ಸಭೆ ನಡೆಸಿದ್ದಾರೆ. ಭದ್ರತಾ ಪರಿಶೀಲನೆ ನಡೆಸುವಂತೆ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಓಂ ಬಿರ್ಲಾ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕರು ಲೋಕಸಭೆಯ ಚೇಂಬರ್ಗೆ ಜಿಗಿಯುವುದನ್ನು ತಡೆಯಲು ಸಂದರ್ಶಕರ ಗ್ಯಾಲರಿಯನ್ನು ಗಾಜಿನಿಂದ ಮುಚ್ಚಲಾಗುತ್ತದೆ. ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಬಾಡಿ ಸ್ಕ್ಯಾನ್ ಯಂತ್ರಗಳನ್ನು ಸಂಸತ್ತಿನಲ್ಲಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ. ಅಂತಿಮವಾಗಿ ಸದನದ ಒಳಗೆ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲು ಕೂಡ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಬುಧವಾರ ಸಂಸತ್ತಿನಲ್ಲಿ ನಡೆದ ಪ್ರಮುಖ ಭದ್ರತಾ ಲೋಪದಲ್ಲಿ ಇಬ್ಬರು ವ್ಯಕ್ತಿಗಳು ಲೋಕಸಭೆಯ ಸಾರ್ವಜನಿಕ ಗ್ಯಾಲರಿಯಿಂದ ಸಂಸದರು ಕುಳಿತುಕೊಳ್ಳುವ ಪ್ರದೇಶಕ್ಕೆ ಜಿಗಿದು ಕಲರ್ ಕ್ರ್ಯಾಕರ್ಸ್ಗಳನ್ನು ಎಸೆದಿದ್ದರು.