ಹೊಸದಿಗಂತ ಡಿಜಿಟಲ್ ಡೆಸ್ಕ್:
2004 ರಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನಟಿ ಸೌಂದರ್ಯ ಹಾಗೂ ಅವರ ಸಹೋದರ ನಿಧನ ಹೊಂದಿದ್ದರು. ಆದರೆ ಸೌಂದರ್ಯಾರದ್ದು ಆಕಸ್ಮಿಕ ಸಾವಲ್ಲ, ಆಕೆಯನ್ನು ಆಸ್ತಿಗಾಗಿ ಕೊಲೆ ಮಾಡಲಾಗಿದೆ. ಈ ಕೊಲೆ ಮಾಡಿಸಿದ್ದು, ತೆಲುಗು ನಟ ಮೋಹನ್ ಬಾಬು ಎನ್ನುವ ಆರೋಪ ಕೇಳಿಬಂದಿದೆ.
ಈ ಬೆನ್ನಲ್ಲೇ ಸೌಂದರ್ಯಾ ಪತಿ ಜಿಎಸ್ ರಘು ಮಾತನಾಡಿದ್ದು, ಈ ಆರೋಪವನ್ನು ಧಿಕ್ಕರಿಸುತ್ತೇನೆ ಎಂದಿದ್ದಾರೆ. ಮೋಹನ್ ಬಾಬು ಅವರು ಸೌಂದರ್ಯ ಕೊಲೆ ಮಾಡಿಸಿದ್ದಾರೆ ಎಂಬ ಆಧಾರ ಪೂರ್ಣವಾಗಿ ಸುಳ್ಳು, ಆಧಾರರಹಿತ. ಮೋಹನ್ ಬಾಬು, ನನ್ನ ಪತ್ನಿ ದಿವಂಗತ ಶ್ರೀಮತಿ ಸೌಂದರ್ಯ ಅವರಿಂದ ಅಕ್ರಮವಾಗಿ ಯಾವುದೇ ಆಸ್ತಿಯನ್ನು ವಶಪಡಿಸಿಕೊಂಡಿಲ್ಲ ಎಂದು ನಾನು ದೃಢೀಕರಿಸುತ್ತೇನೆ. ನನಗೆ ತಿಳಿದ ಮಟ್ಟಿಗೆ ನಾವು ಅವರೊಂದಿಗೆ ಯಾವುದೇ ಭೂ ವ್ಯವಹಾರಗಳನ್ನು ನಡೆಸಿಲ್ಲ ಎಂದಿದ್ದಾರೆ.
ಮೋಹನ್ ಬಾಬು ಅವರು ನನಗೆ 25 ವರ್ಷದಿಂದಲೂ ಪರಿಚಯ, ನಮ್ಮ ಕುಟುಂಬದೊಟ್ಟಿಗೆ ಅತ್ಯಾಪ್ತ ಬಂಧವನ್ನು ಅವರು ಹೊಂದಿದ್ದಾರೆ. ನನ್ನ ಪತ್ನಿ, ನನ್ನ ಭಾಮೈದ, ನನ್ನ ಅತ್ರೆ ಅವರುಗಳು ಸಹ ಮೋಹನ್ ಬಾಬು ಅವರ ಬಗ್ಗೆ ಅಪಾರ ಗೌರವ ಇರಿಸಿಕೊಂಡಿದ್ದರು. ವೈಯಕ್ತಿಕವಾಗಿ ನಾನು ಮೋಹನ್ ಬಾಬು ಅವರನ್ನು ಗೌರವಿಸುತ್ತೇನೆ. ಅವರ ಮೇಲೆ ಹೇರಲಾಗುತ್ತಿರುವ ಸುಳ್ಳು ಆರೋಪದ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಸೌಂದರ್ಯ ಅವರ ಸಾವು ಅಪಘಾತವೇ ಹೊರತು ಮತ್ತೇನೂ ಅಲ್ಲ. ವಿನಾಕಾರಣ ಸುಳ್ಳು ಸುದ್ದಿ ಹರಡುವುದು ಬೇಡವೆಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.