ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನೀರಿನ ದುರ್ಬಳಕೆ ಮಾಡಿದ್ರೆ ಜಲಮಂಡಳಿ ಫೈನ್ ಹಾಕುತ್ತಿದೆ. ಕಳೆದ ಒಂದು ವಾರದಲ್ಲಿ 112 ಪ್ರಕರಣಗಳನ್ನು ಪತ್ತೆಹಚ್ಚಿ, ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡಿದವರಿಂದ 5.60 ಲಕ್ಷ ರೂ.ಗಳ ದಂಡ ವಸೂಲಿಗೆ ಕ್ರಮ ಕೈಗೊಂಡಿದೆ.
ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ಫೆ.17ರಂದು ನಿಷೇಧದ ಆದೇಶ ಹೊರಡಿಸಿದ ನಂತರ ಜಲಮಂಡಳಿ, ಕುಡಿಯುವ ನೀರಿನ ಬಳಕೆ ಬಗ್ಗೆ ತಪಾಸಣೆ ಕೈಗೊಂಡಿದೆ. ಕಾರು, ಬೈಕ್ ಸೇರಿದಂತೆ ವಾಹನಗಳ ಸ್ವಚ್ಛತೆಗೆ, ಮನೆಯ ಅಂಗಳ ಸ್ವಚ್ಛತೆಗೆ, ಗಾರ್ಡನ್ ಗಿಡಗಳ ಪೋಷಣೆ ಸೇರಿದಂತೆ ಬೇರೆ ಬೇರೆ ಉದ್ದೇಶಗಳಿಗೆ ಕುಡಿಯುವ ನೀರು ಬಳಸುವಂತಿಲ್ಲ. ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ದಂಡ ವಿಧಿಸುವ ಅಭಿಯಾನವನ್ನು ನಡೆಸಲಾಗುತ್ತಿದೆ.
ಬೇಸಿಗೆಯಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವ ಉದ್ದೇಶದಿಂದ ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡದಂತೆ ಜಲಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಪ್ರಸ್ತುತ ನಗರದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆಯ ಕೊರತೆಯಿಂದ ಅಂತರ್ಜಲ ಸಹ ಕುಸಿತವಾಗಿದೆ ಎಂದು ಜಲಮಂಡಳಿ ತಿಳಿಸಿದೆ.