ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಮಾರ್ಚ್ 22 ರಿಂದ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ಆರಂಭವಾಗಲಿದೆ. ಪ್ರತಿ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ನೀರು ನೀಡಬೇಕಾಗುತ್ತೆ. ಆದ್ರೆ ಈಗ ಜಲಮಂಡಳಿ ಇಲಾಖೆ ಮೈದಾನಕ್ಕೆ ನೀರನ್ನು ಬಳಕೆ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದೆ.
ಬೇಸಿಗೆ ಆರಂಭವಾಗುತ್ತಿರುವುದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲುಎಸ್ಎಸ್ಬಿ) ಅಲರ್ಟ್ ಆಗಿದೆ. ಪಂದ್ಯದ ಸಮಯದಲ್ಲಿ ಕುಡಿಯುವ ನೀರನ್ನು ಮೈದಾನಕ್ಕೆ ಬಳಸದಂತೆ ಆಯೋಜಕರಿಗೆ ತಿಳಿಸಲಾಗಿದೆ.
ಪ್ರತಿ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ 75 ಸಾವಿರ ಲೀಟರ್ ನೀರು ಹಾಕಲಾಗುತ್ತೆ. ಬೇಸಿಗೆಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಬೇಡಿಕೆ ಹೆಚ್ಚಿರಲಿದ್ದು, ಅಂತರ್ಜಲ ಮಟ್ಟ ಕುಸಿದಿರುವ ಬಗ್ಗೆ ವಿಜ್ಞಾನಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಐಪಿಎಲ್ ಪಂದ್ಯದ ವೇಳೆ ಕುಡಿಯುವ ನೀರನ್ನ ಬಳಸಬಾರದು. ಅದ್ರ ಬದಲಿಗೆ ಕಬ್ಬನ್ ಉದ್ಯಾನವನದ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಸಂಸ್ಕರಿಸಿದ ನೀರನ್ನಷ್ಟೇ ಕ್ರೀಡಾಂಗಣಕ್ಕೆ ಸರಬರಾಜು ಮಾಡಲು ಜಲಮಂಡಳಿ ಅನುಮತಿ ನೀಡಿದೆ.
ಜಲಮಂಡಳಿ ಅಧ್ಯಕ್ಷ ಡಾ.ವಿ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಕುಡಿಯುವ ನೀರನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಬಾರದು. ವಾಹನ ತೊಳೆಯಲು, ಕೈ ತೋಟಕ್ಕೆ, ನಿರ್ಮಾಣ ಕಾಮಗಾರಿಗಳಿಗೆ ನೀರನ್ನು ಬಳಕೆ ಮಾಡಬಾರದು. ನೀರನ್ನು ದುರ್ಬಳಕೆ ಮಾಡಿದ 112 ಜನರ ವಿರುದ್ಧ ದಂಡ ಹಾಕಲಾಗಿದ್ದು, 5 ಲಕ್ಷದ 60 ಸಾವಿರ ರೂಪಾಯಿ ದಂಡದಿಂದ ಬಂದಿದೆ. ಕುಡಿಯುವ ನೀರು ಪೋಲು ಮಾಡದಂತೆ ಎಲ್ಲ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಸಂಸ್ಕರಿಸಿದ ನೀರನ್ನು ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿ ಬಳಕೆ ಮಾಡಬಹುದು ಎಂದು ಹೇಳಿದ್ದಾರೆ.