ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೇನೆಯ ಸಬ್ದಾರ್ ಮೇಜರ್ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ, ಮೃತ ಯೋಧನ ಕುಟುಂಬದ ಮೂವರು ಸೇರಿದಂತೆ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಚಂಡೀಗಢದಿಂದ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿರುವ ಸ್ವಗ್ರಾಮಕ್ಕೆ ಸಬ್ದಾರ್ ಮೇಜರ್ ಸತ್ಯವಾನ್ ಅವರ ಪಾರ್ಥಿವ ಶರೀರವನ್ನು ಆಂಬ್ಯುಲೆನ್ಸ್ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಪೂರ್ವಾಂಚಲ್ ಎಕ್ಸ್ಪ್ರೆಸ್ವೇಯ 79.6 ಕಿ.ಮೀ. ಸಮೀಪದ ಹಲಿಯಾಪುರ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ:
ಅಪಘಾತದಲ್ಲಿ ಸತ್ಯವಾನ್ ಅವರ ಪುತ್ರ ಗೌರವ್ ಸಿಂಗ್ (28), ಸಹೋದರ ರಾಜನ್ ಚೌಧರಿ (35), ಸೋದರಳಿಯ ರಾಮ್ ಸಮುಜ್ ಸಿಂಗ್ (40) ಹಾಗೂ ಆಂಬ್ಯುಲೆನ್ಸ್ ಚಾಲಕ ಜಸ್ಪಾಲ್ (30) ಮೃತಪಟ್ಟಿದ್ದಾರೆ. ಗೌರವ್ ಮತ್ತು ಚಾಲಕ ಜಸ್ಪಾಲ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ರಾಜನ್ ಹಾಗೂ ರಾಮ್ ಸಮುಜ್ ಅವರನ್ನು ಅಯೋಧ್ಯೆ ಜಿಲ್ಲೆಯ ಪಿಥ್ಲಾ-ಕುಮಾರಗಂಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ರಕ್ಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಂಬ್ಯುಲೆನ್ಸ್ ತೀವ್ರವಾಗಿ ಹಾನಿಗೊಳಗಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಮೃತರೆಲ್ಲರ ಕುಟುಂಬಗಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಬ್ದಾರ್ ಮೇಜರ್ ಸತ್ಯವಾನ್ ಅವರ ಪಾರ್ಥಿವ ಶರೀರವನ್ನು ಮುಂದಿನ ವ್ಯವಸ್ಥೆ ಪೂರ್ಣಗೊಳ್ಳುವವರೆಗೆ ಹಲಿಯಾಪುರ ಪೊಲೀಸ್ ಠಾಣೆಯ ಆವರಣದಲ್ಲಿ ಇರಿಸಲಾಗಿದೆ.



