ಜನ‌- ಜಾನುವಾರುಗಳಿಗಾಗಿ ಹಾರಂಗಿ ಜಲಾಶಯದಿಂದ ನೀರು ಬಿಡುಗಡೆ

ಹೊಸದಿಗಂತ ವರದಿ, ಕುಶಾಲನಗರ:

ಜನ ಹಾಗು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ‌ರಾಜ್ಯದ ಎಲ್ಲಾ ಜಲಾಶಯಗಳಿಂದ ನೀರು‌ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರ ಸೂಚಿಸಿದೆ.
ಅದರಂತೆ‌ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದ ಮುಖ್ಯ ನಾಲೆಯ ಮೂಲಕ ಸೋಮವಾರ 500 ಕ್ಯೂಸೆಕ್ ನೀರನ್ನು ಕಾಲುವೆಗೆ ಹರಿಸಲಾಯಿತು.
ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಯ ಮೂಲಕ ಕಣಿವೆಯವರೆಗೆ ನೀರು‌ ಹರಿಸಿ ನಂತರ ಬಲದಂಡೆ ನಾಲೆಯ ಮೂಲಕ 350 ಕ್ಯುಸೆಕ್ ಹಾಗೂ‌ ಎಡದಂಡೆ ನಾಲೆಯ ಮೂಲಕ 150 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಮುಂದಿನ 15 ದಿನಗಳವರೆಗೆ ನಾಲೆಯಲ್ಲಿ ನೀರು ಹರಿಯುವುದರಿಂದ ದನಕರುಗಳಿಗೆ ಕುಡಿಯಲು ಮತ್ತು ರೈತರು ಉಪ ಬೆಳೆಗಳನ್ನು ಬೆಳೆಯಲು ಅನುಕೂಲವಾಗಲಿದೆ. ನೀರನ್ನು ಕೊಡಗು ಜಿಲ್ಲೆ ಮಾತ್ರವಲ್ಲದೆ ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಮೈಸೂರು ಜಿಲ್ಲೆಯ ಕೆ.ಆರ್.ನಗರ, ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕಿನ ರೈತರಿಗೂ ಹರಿಸಲಾಗುವುದು ಎಂದು ಕಾವೇರಿ‌ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಇಂಜಿನಿಯರ್ ಸಿದ್ದರಾಜ್ ಮತ್ತಿತರ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!