August 30, 2026
Sunday, August 30, 2026
spot_img

ತಮಿಳುನಾಡಿಗೆ ನೀರು ಹರಿಸುವ ಆತಂಕದ ನಡುವೆ ಬೆಂಗಳೂರಿನಲ್ಲಿ ನೀರಿನ ಪೋಲು: 692 ಗ್ರಾಹಕರಿಗೆ ದಂಡದ ಬಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಒಂದು ಕಡೆ ಕಾವೇರಿಯಿಂದ ಪ್ರತಿನಿತ್ಯ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಆದೇಶಕ್ಕೆ ರಾಜ್ಯದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ಅನಗತ್ಯವಾಗಿ ದುರ್ಬಳಕೆ ಮಾಡುತ್ತಿದ್ದ ಸಾರ್ವಜನಿಕರಿಗೆ ಬೆಂಗಳೂರು ಜಲಮಂಡಳಿ (BWSSB) ಬಿಸಿ ಮುಟ್ಟಿಸಿದೆ. ನಿಯಮ ಉಲ್ಲಂಘಿಸಿದ 692 ಗ್ರಾಹಕರಿಂದ ಬರೋಬ್ಬರಿ ₹34.60 ಲಕ್ಷ ದಂಡ ವಸೂಲಿ ಮಾಡಲಾಗಿದೆ.‌

ಯಾವ ತಪ್ಪುಗಳಿಗೆ ಬಿತ್ತು ದಂಡ?

ನಗರದಲ್ಲಿ ಕುಡಿಯುವ ಕಾವೇರಿ ನೀರನ್ನು ವಾಹನ ತೊಳೆಯಲು, ತೋಟಗಾರಿಕೆಗೆ ಹಾಗೂ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಬಳಸುತ್ತಿದ್ದವರ ವಿರುದ್ಧ ಜಲಮಂಡಳಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ನಿಯಮ ಉಲ್ಲಂಘಿಸಿದ ಪ್ರತಿಯೊಬ್ಬರಿಗೂ ತಲಾ 5,000 ಗಳಂತೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.

ದಕ್ಷಿಣ ವಲಯದಲ್ಲೇ ಗರಿಷ್ಠ ಕೇಸ್

ನಗರದ ವಿವಿಧ ವಲಯಗಳಲ್ಲಿ ಜಲಮಂಡಳಿ ಅಧಿಕಾರಿಗಳು ದಿಢೀರ್ ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ ದಕ್ಷಿಣ ವಲಯದಲ್ಲಿ ಗರಿಷ್ಠ 206 ಜನರಿಗೆ ದಂಡ ವಿಧಿಸಲಾಗಿದೆ. ಉಳಿದಂತೆ ಪಶ್ಚಿಮ ವಲಯದಲ್ಲಿ 165, ಕೇಂದ್ರ ವಲಯದಲ್ಲಿ 135, ಪೂರ್ವ ವಲಯದಲ್ಲಿ 100 ಹಾಗೂ ಉತ್ತರ ವಲಯದಲ್ಲಿ 86 ಜನರಿಂದ ನಿಯಮ ಉಲ್ಲಂಘನೆಗಾಗಿ ದಂಡ ವಸೂಲಿ ಮಾಡಲಾಗಿದೆ.

ಜುಲೈ 31ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆ ಸ್ಥಗಿತ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಕಾವೇರಿ ನೀರು ಸರಬರಾಜು ಯೋಜನೆ 5ನೇ ಹಂತದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 31ರ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಗರದ ಸಂಬಂಧಿತ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:

ಕಾಮಗಾರಿಯನ್ನು ಸುರಕ್ಷಿತವಾಗಿ ಮುಗಿಸುವ ಸಲುವಾಗಿ ಜಲರೇಚಕ ಯಂತ್ರಾಗಾರಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಮುಂಚಿತವಾಗಿಯೇ ತಮಗೆ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಹಾಗೂ ಲಭ್ಯವಿರುವ ನೀರನ್ನು ಮಿತವಾಗಿ ಬಳಸಬೇಕು ಎಂದು ಜಲಮಂಡಳಿ ವಿನಂತಿಸಿದೆ. ಉಂಟಾಗುವ ಅನಾನುಕೂಲತೆಗೆ ಮಂಡಳಿ ವಿಷಾದ ವ್ಯಕ್ತಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !