ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದು, ನೀರಿನ ಟ್ಯಾಂಕರ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಬೇಡಿಕೆ ಈಡೇರಿಸಲು ಟ್ಯಾಂಕರ್ ಲಾರಿ ಚಾಲಕರು ಹರಸಾಹಸ ಪಡುತ್ತಿದ್ದಾರೆ. ಪರಿಣಾಮವಾಗಿ, ಬೆಂಗಳೂರಿನಲ್ಲಿ ವೇಗವಾಗಿ ವಾಟರ್ ಟ್ಯಾಂಕರ್ ಲಾರಿಯನ್ನು ಓಡಿಸುವಾಗ ಲಾರಿ ಪಲ್ಟಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಲಾರಿ ಅಡಿಯಲ್ಲಿಯೇ ಸಿಲುಕಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಪೀಣ್ಯ ಸೆಕೆಂಡ್ ಸ್ಟೇಜ್ ತಿಗಳರಪೇಟೆ ರಸ್ತೆಯಲ್ಲಿ ನಡೆದಿದೆ.
ಇಮಾನುದ್ದೀನ್ (20) ಎಂಬ ಪಾದಚಾರಿ ಮೃತಪಟ್ಟಿದ್ದಾರೆ. ಬುಧವಾರ ಬೆಳಗ್ಗೆ ಅವರು ಕೆಲಸಕ್ಕೆ ಹೋಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ನೀರಿನ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದು ಉರುಳಿ ಬಿದ್ದ ಪರಿಣಾಮ ರಸ್ತೆಯಲ್ಲಿ ಹೋಗುತ್ತಿದ್ದ ಇಮಾನುದ್ದೀನ್ ಕಡೆಗೆ ಪಲ್ಟಿಯಾಗಿ ಬಿದ್ದಿದೆ. ಈ ಅಪಘಾತದಲ್ಲಿ ಇಮಾನುದ್ದೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.