Wayanad Landslide | ಸೇನೆಯ ರಕ್ಷಣಾ ಕಾರ್ಯಾಚರಣೆ ಮುಕ್ತಾಯ: ಹೂಮಳೆ ಸುರಿಸಿ ಬೀಳ್ಕೊಟ್ಟ ಜನತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್; 

ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 400 ದಾಟಿದೆ. ಕಳೆದ 10 ದಿನಗಳಿಂದ ಅವಶೇಷಗಳ ಅಡಿಯಲ್ಲಿ, ಬೆಟ್ಟ ಗುಡ್ಡಗಳಲ್ಲಿ ಸಿಲುಕಿದ್ದ ಜನರ ರಕ್ಷಣೆಗಾಗಿ ನಿರಂತರವಾಗಿ ಕೈಗೊಂಡಿದ್ದ ಸೇನೆಯ ಕಾರ್ಯಾಚರಣೆಯು ಮುಕ್ತಾಯವಾಗಿದೆ.

ಕಳೆದ 10 ದಿನಗಳಲ್ಲಿ ಸಾವಿರಾರು ಜನರನ್ನು ರಕ್ಷಣೆ ಮಾಡಿದ ಯೋಧರು ಕಾರ್ಯಾಚರಣೆ ಮುಗಿಸಿ ಹೊರಡುವ ವೇಳೆ ಜನ ಚಪ್ಪಾಳೆ ತಟ್ಟಿ, ಸೆಲ್ಯೂಟ್‌ ಹೊಡೆದು, ಹೂಮಳೆ ಸುರಿಸಿ ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡಿದ್ದಾರೆ. ಈ ವಿಡಿಯೋ ಈಗ ಭಾರಿ ವೈರಲ್‌ ಆಗಿದೆ.

ರಕ್ಷಣಾ ಕಾರ್ಯಾಚರಣೆ ಕೈಗೊಂಡ ಭಾರತದ ಯೋಧರಿಗೆ ವಯನಾಡು ಜಿಲ್ಲಾಡಳಿತವು ಬೀಳ್ಕೊಡುಗೆ ಸಮಾರಂಭ ಆಯೋಜಿಸಿತ್ತು. ಇದೇ ವೇಳೆ ಸಾರ್ವಜನಿಕರು ಕೂಡ ಯೋಧರಿಗೆ ಗೌರವ ಸಲ್ಲಿಸಿದರು. ಯೋಧರ ಮೇಲೆ ಹೂಗಳನ್ನು ಸುರಿದು, ಚಪ್ಪಾಳೆ ತಟ್ಟಿ ಭಾವುಕರಾಗಿ ಯೋಧರನ್ನು ಬೀಳ್ಕೊಟ್ಟಿದ್ದಾರೆ.

ಕೊಚ್ಚಿ ಡಿಫೆನ್ಸ್‌ ಪಬ್ಲಿಕ್‌ ರಿಲೇಷನ್ಸ್‌ ಆಫೀಸರ್‌ ಎಕ್ಸ್ ಖಾತೆಯಿಂದ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

https://x.com/DefencePROkochi/status/1821485343499043126

ಭಾರತೀಯ ಸೇನೆಯ ಸುಮಾರು 500 ಸದಸ್ಯರಿರುವ ಬೆಟಾಲಿಯನ್‌ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು. ತಿರುವನಂತಪುರಂ, ಕಲ್ಲಿಕೋಟೆ, ಕಣ್ಣೂರು ಹಾಗೂ ಬೆಂಗಳೂರಿನಿಂದ ಹೋಗಿದ್ದ ಯೋಧರು ವಾಪಸಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯ ಜತೆಗೆ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳದ ಸಿಬ್ಬಂದಿ, ಕೇರಳ ಪೊಲೀಸರು ಕೂಡ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು.

ಮೆಪ್ಪಾಡಿಯ ಸೂಜಿಪ್ಪಾರ ಜಲಪಾತವಿರುವ ಎರಾಕುಂಡ್‌ ಅರಣ್ಯ ಪ್ರದೇಶದಲ್ಲಿದ್ದ ಕೃಷ್ಣನ್‌, ಅವರ ಪತ್ನಿ ಶಾಂತಾ ಮತ್ತು ನಾಲ್ಕು ಮಕ್ಕಳನ್ನು ಒಳಗೊಂಡ ಕುಟುಂಬವನ್ನು ನಾಲ್ವರು ಅರಣ್ಯಾಧಿಗಳ ಗುಂಪು ಸತತ ಎಂಟು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿತ್ತು. 10 ಹಗ್ಗಗಳನ್ನು ಸೇರಿಸಿ ಕಟ್ಟಿ ಈ ಕಾರ್ಯಾಚರಣೆ ನಡೆಸಲಾಗಿತ್ತು.ಕಲ್ಪೆಟ್ಟ ರೇಂಜ್‌ ಫಾರೆಸ್ಟ್‌ ಆಫೀಸರ್‌ ಕೆ.ಆಶೀಫ್‌, ಮುಂಡಕೈ ಸೆಕ್ಷನ್‌ ಫಾರೆಸ್ಟ್‌ ಆಫೀಸರ್‌ ಜಯಚಂದ್ರನ್‌, ಕಲ್ಪೆಟ್ಟ ರೇಂಜ್‌ ಬೀಟ್‌ ಫಾರೆಸ್ಟ್‌ ಆಫೀಸರ್‌ ಕೆ.ಅನಿಲ್‌ ಕುಮಾರ್‌ ಮತ್ತು ಕಲ್ಪೆಟ್ಟ ಆರ್‌.ಆರ್‌.ಡಿ. ಅನೂಪ್‌ ತೋಮಸ್‌ ಅವರನ್ನೊಳಗೊಂಡ ಗುಂಪು ಅತ್ಯಂತ ಸಾಹಸಿಕವಾಗಿ ಈ ಆದಿವಾಸಿ ಕುಟುಂಬವನ್ನು ಕಾಪಾಡಿತ್ತು. ಇದು ದೇಶಾದ್ಯಂತ ಸುದ್ದಿಯಾಗಿತ್ತು. ರಕ್ಷಣಾ ಕಾರ್ಯಾಚರಣೆ ತಂಡಗಳ ಶ್ರಮವನ್ನು ಜನ ಕೊಂಡಾಡಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!