ಹೊಸದಿಗಂತ ವಯನಾಡ್:
ಕೇರಳದ ವಯನಾಡ್ ಜಿಲ್ಲೆಯ ಪಂಚಾರಕೊಲ್ಲಿಯಲ್ಲಿ ಕಾಪಿ ಬೀಜ ಕೊಯ್ಯುತ್ತಿದ್ದ ರಾಧಾ (48)ಎಂಬ ಬುಡಗಟ್ಟು ಮಹಿಳೆ ಹುಲಿ ದಾಳಿಗೆ ಬಲಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮಹಿಳೆ ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಮಿನ್ನು ಮಣಿಯ ಚಿಕ್ಕಪ್ಪನ ಮಡದಿಯಾಗಿದ್ದಾರೆ. ಇದೀಗ ನರಭಕ್ಷಕ ಹುಲಿಯ ಸೆರೆ ಇಲ್ಲವೇ ಗುಂಡಿಕ್ಕಿ ಸಾಯಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ರಾಧಾ ಅವರು ಅರಣ್ಯ ವೀಕ್ಷಕ ಅಚ್ಚಪ್ಪನ್ ಎಂಬವರ ಪತ್ನಿಯಾಗಿದ್ದಾರೆ.
ಚಿಕ್ಕಮ್ಮ ಹುಲಿ ದಾಳಿಗೆ ಬಲಿಯಾದ ಬಗ್ಗೆ ಮಿನ್ನು ಮಣಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಬರಹದ ಮೂಲಕ ಹಂಚಿಕೊಂಡಿದ್ದಾರೆ. ಈ ಘಟನೆ ತೀವ್ರ ಆಘಾತವನ್ನುಂಟು ಮಾಡಿದ್ದು ತೀವ್ರ ದುಃಖವಾಗಿದೆ. ಪಂಚಾರಕೊಲ್ಲಿಯಲ್ಲಿ ಹುಲಿ ದಾಳಿಗೆ ಬಲಿಯಾದವರು ನನ್ನ ಚಿಕ್ಕಪ್ಪನ ಮಡದಿ ಎಂದು ಅವರು ತಿಳಿಸಿದ್ದಾರೆ.
ಮೀನ್‌ಮುಟ್ಟಿ ನಿವಾಸಿಯಾಗಿರುವ ರಾಧಾ ಅವರು ಬೆಳಿಗ್ಗೆ ಕಾಫಿ ಬೀಜ ಕೊಯ್ಯುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಹುಲಿ ದಾಳಿಗೆ ರಾಧಾ ಬಲಿಯಾದ ಘಟನೆ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದು, ಕೇರಳ ಸರಕಾರದ ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ. ಜನರ ಜೀವ-ಆಸ್ತಿಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಣಿ ಆಗ್ರಹಿಸಿದ್ದಾರೆ.
ವಯನಾಡು ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಸ್ತುತ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರವಾಗಿದೆ. ಈ ಹಿಂದೆಯೂ ಆನೆ ದಾಳಿ ಸೇರಿದಂತೆ ಕಾಡುಪ್ರಾಣಿಗಳ ದಾಳಿಯಿಂದ ಹಲವು ಜೀವಗಳು ಬಲಿಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕೇರಳ ಸರಕಾರ ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ಜನರ ಪ್ರತಿಭಟನೆಯ ಬೆನ್ನಿಗೇ ಎಚ್ಚೆತ್ತುಕೊಂಡಿರುವ ಸರಕಾರ ಹುಲಿಯ ಸೆರೆಗೆ ವಿಫಲವಾದರೆ ಗುಂಡಿಕ್ಕಿ ಸಾಯಿಸಲು ಆದೇಶ ನೀಡಿರುವುದಾಗಿ ಪ್ರಕಟಿಸಿದೆ.
ಅರಣ್ಯ ಸಚಿವ ಎ.ಕೆ.ಶಶಿಧರನ್ ಮಾನವ ಸುರಕ್ಷತೆಯನ್ನು ಆದ್ಯತೆಯಾಗಿಟ್ಟುಕೊಂಡು ಕ್ರಿಯಾಯೋಜನೆಯೊಂದನ್ನು ರೂಪಿಸಲಾಗಿದೆ . ಹುಲಿಯನ್ನು ಸೆರೆಹಿಡಿಯಲು ಸಾಧ್ಯವಾಗದೆ ಹೋದರೆ ಗುಂಡಿಕ್ಕಿ ಸಾಯಿಸಲು ಆದೇಶಿಸಲಾಗಿದೆ . ಬಂಡೀಪುರ-ವಯನಾಡ್ ಅಭಯಾರಣ್ಯ ಕಾರಿಡಾರ್‌ನುದ್ದಕ್ಕೂ ಗಸ್ತನ್ನು ಬಿಗಿಗೊಳಿಸಲಾಗಿದೆ ಎಂದರು.
ಮೂಲಗಳ ಪ್ರಕಾರ, ಶುಕ್ರವಾರ ಬೆಳಿಗ್ಗೆ ರಾಧಾ ಅವರನ್ನು ಅವರ ಪತಿ ಕಾಫಿ ತೋಟಕ್ಕೆ ಕರೆತಂದು ಬಿಟ್ಟು ಹೋಗಿದ್ದರು.ಆದರೆ ೧೧ಗಂಟೆಯ ವೇಳೆಗೆ ಅವರ ಶವ ಪತ್ತೆಯಾಗಿದೆ. ಅನಂತರ ಮಾನಂತವಾಡಿಯಲ್ಲಿರುವ ವಯನಾಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಒಯ್ಯಲಾಗಿದೆ. ರಾಜ್ಯ ಸರಕಾರ ಮೃತ ರಾಧಾರ ಕುಟುಂಬಕ್ಕೆ ೧೧ಲ.ರೂ.ಗಳ ಪರಿಹಾರ ಘೋಷಿಸಿದೆ. ಈ ಪೈಕಿ 5ಲ.ರೂ.ಗಳನ್ನು ತಕ್ಷಣವೇ ನೀಡಲಾಗುವುದು ಎಂದು ಸರಕಾರ ಪ್ರಕಟಿಸಿದೆ.
ರಾಜ್ಯದ ಪರಿಶಿಷ್ಟ ಜಾತಿ-ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಒ.ಆರ್.ಕೇಳು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತರ ಕುಟುಂಬ ಸದಸ್ಯರೊಬ್ಬರಿಗೆ ಉದ್ಯೋಗ ಒದಗಿಸುವ ಬಗ್ಗೆ ಸಂಪುಟ ನಿರ್ಧರಿಸಲಿದೆ ಎಂದಿದ್ದಾರೆ. ತೋಟಕಾರ್ಮಿಕರ ರಕ್ಷಣೆಗಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಸ್ಥಳದಲ್ಲಿ ನಿಯೋಜಿಸುವುದಾಗಿಯೂ ಸಚಿವರು ಭರವಸೆ ನೀಡಿದ್ದಾರೆ .