July 26, 2026
Sunday, July 26, 2026
spot_img

ನಮ್ಮದು ಸಿದ್ದರಾಮಯ್ಯ-ಡಿಕೆಶಿ ಟೀಮ್ ಅಲ್ಲ, 146 ಶಾಸಕರ ಕಾಂಗ್ರೆಸ್ ಟೀಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಲ್ಪಸಂಖ್ಯಾತ ನಾಯಕರ ವಿರುದ್ಧ ಇತ್ತೀಚೆಗೆ ಕೈಗೊಳ್ಳಲಾದ ಶಿಸ್ತು ಕ್ರಮದ ಹಿಂದೆ ಯಾವುದೇ ವೈಯಕ್ತಿಕ ಉದ್ದೇಶವಿಲ್ಲ, ಇದೆಲ್ಲವೂ ಹೈಕಮಾಂಡ್ ಸೂಚನೆಯಂತೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ವೈಯಕ್ತಿಕ ನಿರ್ಧಾರ ಇದರಲ್ಲಿ ಯಾವುದೂ ಇಲ್ಲ. ದೆಹಲಿ ನಾಯಕರ ಸಲಹೆ ಮತ್ತು ಪಕ್ಷದ ಆಂತರಿಕ ವರದಿಗಳ ಆಧಾರದ ಮೇಲೆ ನಾವು ಈ ಕ್ರಮ ಕೈಗೊಂಡಿದ್ದೇವೆ. ಎಲ್ಲರೂ ನನ್ನನ್ನೇ ಗುರಿ ಮಾಡಬಹುದು, ಆದರೆ ಪಕ್ಷದ ಶಿಸ್ತು ಕಾಪಾಡುವುದು ನನ್ನ ಜವಾಬ್ದಾರಿ. ಕಾಂಗ್ರೆಸ್ ಪಕ್ಷವು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿಯೇ ಇದೆ” ಎಂದು ಸಮರ್ಥಿಸಿಕೊಂಡರು.

ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಎಂಬ ಎರಡು ಗುಂಪುಗಳಿವೆ ಎಂಬ ಚರ್ಚೆಗೆ ತೆರೆ ಎಳೆದ ಅವರು, “ಸಿದ್ದರಾಮಯ್ಯ ಗುಂಪು ಅಥವಾ ನನ್ನ ಗುಂಪು ಎಂದು ಯಾರೂ ಎದೆಯ ಮೇಲೆ ಬೋರ್ಡ್ ಹಾಕಿಕೊಂಡಿಲ್ಲ. ನಾವೆಲ್ಲರೂ 146 ಶಾಸಕರು ಒಂದೇ ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಸಿಎಂ ಮತ್ತು ನಾನು ಪ್ರತಿದಿನ ಚರ್ಚೆ ಮಾಡುತ್ತೇವೆ, ಒಟ್ಟಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್‌ನಲ್ಲಿ ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು ಮಾತ್ರ” ಎಂದು ವಿರೋಧಿಗಳಿಗೆ ಖಡಕ್ ಉತ್ತರ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !