ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಶಿಕ್ಷಣ ಸಚಿವ ಹುದ್ದೆಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪ್ರಧಾನ್ ಅವರ ಈ ನಡೆ ವೈಯಕ್ತಿಕ ಮಹತ್ವಾಕಾಂಕ್ಷೆಗಿಂತ ರಾಷ್ಟ್ರೀಯ ಹಿತಾಸಕ್ತಿಯನ್ನು ಎತ್ತಿಹಿಡಿಯುವ ಆದರ್ಶ ಮಾರ್ಗವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಎಕ್ಸ್ ಮೂಲಕ ಪ್ರಶಂಸೆ
ಈ ಮಹತ್ವದ ಬೆಳವಣಿಗೆಯ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, “ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ಅಥವಾ ಹುದ್ದೆಗಿಂತ ದೇಶದ ಹಿತಾಸಕ್ತಿ, ಯುವಕರು ಮತ್ತು ವಿದ್ಯಾರ್ಥಿಗಳ ಭವಿಷ್ಯವೇ ಅತ್ಯಂತ ಪ್ರಮುಖವಾಗಿರುತ್ತದೆ. ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಬಿಜೆಪಿಯ ಇದೇ ಉನ್ನತ ತತ್ವ ಮತ್ತು ನೈತಿಕತೆಗೆ ಸಾಕ್ಷಿಯಾಗಿದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಸರ್ಕಾರ ಬದ್ಧ
ಮುಂದುವರಿದು ಮಾತನಾಡಿದ ಗೃಹ ಸಚಿವ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಯುವ ಸಮೂಹದ ಭಾವನೆಗಳಿಗೆ ಮತ್ತು ಅವರ ಭವಿಷ್ಯಕ್ಕೆ ಅತ್ಯುನ್ನತ ಗೌರವ ನೀಡುತ್ತದೆ. ದೇಶದಲ್ಲಿ ಇತ್ತೀಚೆಗೆ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಹಾಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯವಸ್ಥಿತ ಸುಧಾರಣೆಗಳನ್ನು ತರಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ದೃಢವಾಗಿ ಒತ್ತಿ ಹೇಳಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಿಂದ ತೆರವಾಗಿದ್ದ ಕೇಂದ್ರ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಉಸ್ತುವಾರಿಯನ್ನು ಈಗಾಗಲೇ ಕನ್ನಡಿಗ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ವಹಿಸಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ.



