ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಉಕ್ರೇನ್-ರಷ್ಯಾ ಯುದ್ಧದಲ್ಲಿ ಶಾಂತಿಯ ಮಾತು ಕೇಳಿ ಬರುತ್ತಿದ್ದು, ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಅಮೆರಿಕ ಮತ್ತು ಉಕ್ರೇನ್ ಪ್ರತಿನಿಧಿಗಳ ನಡುವೆ ನಡೆದ ಮಾತುಕತೆಯಲ್ಲಿ ಉಕ್ರೇನ್ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ. ರಷ್ಯಾದೊಂದಿಗೆ ತಕ್ಷಣವೇ ಮಾತುಕತೆ ನಡೆಸಲು ನಾವು ಸಿದ್ಧ ಎಂದು ಘೋಷಿಸಿದೆ.
ಉಕ್ರೇನ್ ನ ಈ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಲಿಟರಿ ಸಹಾಯವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ. ಇದರಿಂದ ಯುದ್ಧವು ಅಂತ್ಯಗೊಳ್ಳುವ ಹಂತ ತಲುಪುತ್ತಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಜೆಡ್ಡಾದ ಹೋಟೆಲ್‌ನಲ್ಲಿ ಸುಮಾರು ಒಂಬತ್ತು ಗಂಟೆಗಳ ಕಾಲ ನಡೆದ ಮಾತುಕತೆಯ ನಂತರ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ‘ಇಂದು ನಾವು ಒಂದು ಪ್ರಸ್ತಾಪವನ್ನು ಮಾಡಿದ್ದೇವೆ. ಉಕ್ರೇನ್ ಒಪ್ಪಿಕೊಂಡಿದೆ. ಅದರ ಪ್ರಕಾರ ಉಕ್ರೇನ್ ತಕ್ಷಣದ ಕದನ ವಿರಾಮದೊಂದಿಗೆ ಮಾತುಕತೆಗೂ ಸಿದ್ಧವಾಗಿದೆ’ ಎಂದು ಹೇಳಿದರು.
ಈ ಪ್ರಸ್ತಾಪವನ್ನು ರಷ್ಯಾಕ್ಕೆ ತೆಗೆದುಕೊಂಡು ಹೋಗುತ್ತೇವೆ. ಅವರು ಶಾಂತಿಗೆ ಒಪ್ಪುತ್ತಾರೆ ಎಂದು ನಾವು ಭಾವಿಸುತ್ತೇವೆ. ಈಗ ನಿರ್ಧಾರ ಅವರ ಕೈಯಲ್ಲಿದೆ. ಅವರು ತಿರಸ್ಕರಿಸಿದರೆ, ಶಾಂತಿಗೆ ಅಡ್ಡಿಯಾಗುವುದು ಯಾರು ಎಂದು ನಮಗೆ ಸ್ಪಷ್ಟವಾಗುತ್ತದೆ’ ಎಂದು ತಿಳಿಸಿದರು.
ಮಾತುಕತೆಗಿಂತ ಮುಂಚೆ ದಾಳಿ ಮಾಡಿದ ಉಕ್ರೇನ್
ಅಮೆರಿಕದ ಬೆಂಬಲವನ್ನು (ಮಿಲಿಟರಿ ಸಹಾಯ, ಗುಪ್ತಚರ ಹಂಚಿಕೆ) ಸ್ಥಗಿತಗೊಳಿಸಿದ ನಂತರ ರಷ್ಯಾ ಉಕ್ರೇನ್ ಮೇಲೆ ದಾಳಿ ಹೆಚ್ಚಿಸಿದೆ. ವಿಶೇಷವಾಗಿ ವಿದ್ಯುತ್ ಮೂಲಸೌಕರ್ಯಗಳ ಮೇಲೆ ತೀವ್ರ ದಾಳಿ ಮಾಡಿದೆ. ಹಾಗೆಯೇ ಉಕ್ರೇನ್ ಪಡೆಗಳು ನುಗ್ಗಿದ್ದ ರಷ್ಯಾದ ಕುರ್ಸ್ಕ್ ಪ್ರದೇಶವನ್ನು ಮರಳಿ ವಶಪಡಿಸಿಕೊಂಡಿದೆ. ಜೆಡ್ಡಾದಲ್ಲಿ ಮಾತುಕತೆ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಉಕ್ರೇನ್ ಮಾಸ್ಕೋದ ಮೇಲೆ ಭಾರಿ ದಾಳಿ ಮಾಡಿತು. ನೂರಾರು ಡ್ರೋನ್‌ಗಳು ಮಾಸ್ಕೋ ಸೇರಿದಂತೆ ಇತರ ಪ್ರದೇಶಗಳ ಮೇಲೆ ಹಾರಾಡಿದವು. ಈ ದಾಳಿಯಲ್ಲಿ ಮೂವರು ಪ್ರಾಣ ಕಳೆದುಕೊಂಡರು.