ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ (Election) ನಡೆಸಲು ನಾವು ಸಿದ್ಧ ಎಂದು (Supreme Court) ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‍ಗೆ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ನಿರ್ದಿಷ್ಟ ಸಮಯ ನೀಡಲು ಸಾಧ್ಯವಿಲ್ಲ. ಆದರೆ ಕೇಂದ್ರಾಡಳಿತ ಸ್ಥಾನಮಾನ ತಾತ್ಕಾಲಿಕವಾಗಿದೆ. ಈ ನಿಟ್ಟಿನಲ್ಲಿ ಚುನಾವಣೆ ನಡೆಸಲು ಸಿದ್ಧ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆರ್ಟಿಕಲ್ 370 ರದ್ದು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾ.ಡಿ.ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿದೆ.
ಈ ವೇಳೆ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆಗೆ ಸಿದ್ಧವಿದ್ದೇವೆ. ಒಟ್ಟು ಮೂರು ಚುನಾವಣೆಗಳು ಬಾಕಿ ಇವೆ. ಮೊದಲ ಬಾರಿಗೆ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಮೊದಲು ಪಂಚಾಯತ್‍ಗಳಿಗೆ ಚುನಾವಣೆ ನಡೆಯಲಿದೆ. ಎರಡನೇಯದಾಗಿ ಪುರಸಭೆ ಚುನಾವಣೆಗಳು ಮತ್ತು ನಂತರ ವಿಧಾನಸಭೆ ಚುನಾವಣೆಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.
ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 2018 ರಿಂದ 2023ಕ್ಕೆ ಹೋಲಿಸಿದರೆ ಭಯೋತ್ಪಾದಕ ಪ್ರಕರಣಗಳು 45.2% ರಷ್ಟು ಕಡಿಮೆಯಾಗಿದೆ. ಭಯೋತ್ಪಾದಕರ ಒಳನುಸುಳುವಿಕೆ 90% ರಷ್ಟು ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಲ್ಲು ತೂರಾಟದಂತಹ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳು 97% ರಷ್ಟು ಕಡಿಮೆಯಾಗಿದೆ. ಭದ್ರತಾ ಸಿಬ್ಬಂದಿ ಮೇಲಿನ ದಾಳಿಗಳು 65% ರಷ್ಟು ಕಡಿಮೆಯಾಗಿದೆ. ಈ ಹಿಂದೆ 2018ರಲ್ಲಿ 1,767 ಕಲ್ಲು ತೂರಾಟ ನಡೆದಿದ್ದು, ಈಗ ಅದು ಶೂನ್ಯಕ್ಕೆ ಇಳಿದಿದೆ. 2018 ರಲ್ಲಿ 52 ಸಂಘಟಿತ ಬಂದ್‍ಗಳು ಆಗಿದ್ದವು ಮತ್ತು ಈಗ ಅದು ಶೂನ್ಯವಾಗಿದೆ ಎಂದು ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.