ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂದು 6ಜಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ನಾಯಕರಾಗುವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಂಡಿಯಾ ಮೊಬೈಲ್ ಕಾಂಗ್ರೆಸ್ ನ 7ನೇ ಆವೃತ್ತಿಯನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 21 ನೇ ಶತಮಾನದ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಈ ಸಮ್ಮೇಳನವು ಕೋಟ್ಯಂತರ ಜನರ ಹಣೆಬರಹವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ನಾವು ಭವಿಷ್ಯದ ಬಗ್ಗೆ ಮಾತನಾಡುವ ಸಮಯವಿತ್ತು, ಅಂದಆದರೆ, ಇಂದು ತಂತ್ರಜ್ಞಾನದಲ್ಲಿನ ಬದಲಾವಣೆಗಳಿಂದಾಗಿ ಭವಿಷ್ಯವು ಇಲ್ಲಿ ಮತ್ತು ಈಗ ಇದೆ ಎಂದು ನಾವು ಹೇಳುತ್ತಿದ್ದೇವೆ ಎಂದು ತಿಳಿಸಿದರು.
ನಾವು ದೇಶದಲ್ಲಿ 5 ಜಿ ವಿಸ್ತರಿಸುವುದು ಮಾತ್ರವಲ್ಲದೇ 6 ಜಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕರಾಗುವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ 2ಜಿ ತರಂಗಾಂತರ ಹಂಚಿಕೆ ವೇಳೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ 4 ಜಿ ವಿಸ್ತರಿಸಲಾಯಿತು. ಆದರೆ ನಮ್ಮ ಮೇಲೆ ಯಾವುದೇ ಅಪವಾದ ಬರಲಿಲ್ಲ. 6 ಜಿ ತಂತ್ರಜ್ಞಾನದಲ್ಲಿ ಭಾರತವು ಜಗತ್ತನ್ನು ಮುನ್ನಡೆಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಅದು ತಂತ್ರಜ್ಞಾನವಾಗಿರಲಿ, ಸಂಪರ್ಕವಾಗಿರಲಿ, 6 ಜಿ ಆಗಿರಲಿ, ಅದು ಎಐ, ಸೈಬರ್ ಸೆಕ್ಯುರಿಟಿ, ಸೆಮಿಕಂಡಕ್ಟರ್ಗಳು, ಡ್ರೋನ್ಗಳು, ಆಳ ಸಮುದ್ರ ಹೀಗೆ ಯಾವುದೇ ಕ್ಷೇತ್ರದಲ್ಲಾದರೂ ಮುಂಬರುವ ಸಮಯವು ಸಂಪೂರ್ಣವಾಗಿ ವಿಭಿನ್ನವಾಗಿರಲಿದೆ ಮತ್ತು ನಮ್ಮ ಯುವ ಪೀಳಿಗೆಯು ದೇಶದ ಭವಿಷ್ಯವನ್ನು ಮುನ್ನಡೆಸುತ್ತಿದೆ ಎಂಬುದು ಎಲ್ಲರಿಗೂ ಸಂತೋಷದ ವಿಷಯವಾಗಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ, ಗೂಗಲ್ ತನ್ನ ಪಿಕ್ಸೆಲ್ ಫೋನ್ ಅನ್ನು ಭಾರತದಲ್ಲಿ ತಯಾರಿಸುವುದಾಗಿ ಘೋಷಿಸಿದೆ. ಸ್ಯಾಮ್ಸಂಗ್ನ ಫೋಲ್ಡ್ 5 ಮೊಬೈಲ್ ಫೋನ್ ಮತ್ತು ಆಯಪಲ್ನ ಐಫೋನ್ 15 ಭಾರತದಲ್ಲಿ ತಯಾರಾಗುತ್ತಿವೆ. ಜಗತ್ತು ಈಗ ಮೇಡ್ ಇನ್ ಇಂಡಿಯಾ ಮೊಬೈಲ್ ಫೋನ್ ಗಳನ್ನು ಬಳಸುತ್ತಿದೆ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ ಎಂದು ನುಡಿದರು.