ನಮ್ಮದು ರಾಮಜನ್ಮ ಭೂಮಿ, ಕೆಲವರು ಮಾಡುವ ಕೃತ್ಯದಿಂದ ಭಾರತಕ್ಕೆ ಕೆಟ್ಟ ಹೆಸರು: ಧ್ರುವ ಸರ್ಜಾ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಲ್ಕತಾ ಮಹಿಳಾ ಟ್ರೈನಿ ವೈದ್ಯರೊಬ್ಬರ ಮೇಲೆ ಅತ್ಯಾಚಾರ, ಹತ್ಯೆ ವಿರುದ್ದ ದೇಶದಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಸದನಲ್ ವುಡ್ ನಟ ಧ್ರುವ ಸರ್ಜಾ ಕೂಡ ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ನಾನು ಮಾರ್ಟಿನ್​ ಸಿನಿಮಾದ ಪ್ರಚಾರದಲ್ಲಿ ಇದ್ದೇನೆ ಎಂಬುದು ಹೌದು. ಮಾರ್ಟಿನ್​ ಸಿನಿಮಾವನ್ನು ಒಂದು ನಿಮಿಷ ಪಕ್ಕಕ್ಕೆ ಇಟ್ಟುಬಿಡೋಣ. ಇವತ್ತು ವಿಡಿಯೋ ಮಾಡುತ್ತಿರುವ ಉದ್ದೇಶ, 2024ರ ಆಗಸ್ಟ್​ 14ರ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ 16 ನಿಮಿಷಕ್ಕೆ ಒಂದು ಹೆಣ್ಣು ಮಗು ಮೇಲೆ ಅತ್ಯಾಚಾರ ನಡೆಯುತ್ತಿದೆ. ಎಲ್ಲಿ ಹೆಣ್ಣುಮಕ್ಕಳಿಗೆ ಮರ್ಯಾದೆ, ಗೌರವ ಇರುವುದಿಲ್ಲವೋ ಅಲ್ಲಿ ಭಗವಂತನೇ ಇರುವುದಿಲ್ಲ’.

‘ನಮ್ಮದು ರಾಮಜನ್ಮ ಭೂಮಿ. ಕೆಲವರು ಮಾಡುವ ಕೃತ್ಯದಿಂದ ನಮ್ಮ ಭಾರತಕ್ಕೆ ಕೆಟ್ಟ ಹೆಸರು. ಹೆಣ್ಮಕ್ಕಳಿಗೆ ಮಾತ್ರ ಹೀಗಿರಿ, ಹಾಗಿರಿ, ಹೀಗೆಯೇ ಬಟ್ಟೆ ಹಾಕಬೇಕು, ಇದನ್ನೇ ಮಾಡಬೇಕು, ಅದನ್ನೇ ಮಾಡಬೇಕು ಅಂತ ಹೇಳುವುದಕ್ಕಿಂತ ಒಬ್ಬ ಹುಡುಗನನ್ನು ಬೆಳೆಸುವಾಗ ಮೂರು ವಿಷಯ ಕಡ್ಡಾಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಹೇಳಿಕೊಡಬೇಕು. ಹೆಣ್ಮಕ್ಕಳನ್ನು ಹೇಗೆ ರಕ್ಷಿಸಬೇಕು, ಹೇಗೆ ಬೆಂಬಲಿಸಬೇಕು, ಹೇಗೆ ಗೌರವಿಸಬೇಕು ಎಂಬುದನ್ನು ಹೇಳಿಕೊಡಲೇಬೇಕು’ ಎಂದಿದ್ದಾರೆ.

‘ಇಂಥ ರೇಪಿಸ್ಟ್​ಗಳು ಸಿಕ್ಕಿ, ಕಾನೂನಿನ ಪ್ರಕಾರ ಶಿಕ್ಷೆ ಆಗಲಿ ಅಂತ ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇವೆ. ಅವರಿಗೆ ಎಂಥ ಶಿಕ್ಷೆ ಕೊಟ್ಟರೂ ಸಮಾಧಾನ ಆಗಲ್ಲ. ಇಂಥ ನನ್ಮಕ್ಕಳನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಜೀವಂತವಾಗಿ ಸುಟ್ಟುಹಾಕಿದರೂ ಸಮಾಧಾನ ಆಗಲ್ಲ. ಆ ಭಗವಂತ ಇಂಥವರಿಗೆ ಒಳ್ಳೆಯದು ಮಾಡದೇ ಇರಲಿ ಅಂತ ಮನಸಾರೆ ಕೇಳಿಕೊಳ್ಳುತ್ತೇನೆ. ನನಗೂ ಹೆಣ್ಣು ಮಗಳು ಇದ್ದಾಳೆ. ಯಾರಿಗೋ ಅನ್ಯಾಯ ಆಗಿದೆ ಎಂದಾಗ ಅವರ ಜೊತೆ ನಾವು ಇರಬೇಕು. ದಯವಿಟ್ಟು ಧ್ವನಿಯೆತ್ತಿ. ಎಲ್ಲರೂ ನ್ಯಾಯ ಕೇಳೋಣ. ಇದು ಭಾರತವನ್ನು ಬದಲಾಯಿಸುವ ಸಮಯ. ನಾವೆಲ್ಲರೂ ಒಂದಾಗಬೇಕು’ ಎಂದು ಧ್ರುವ ಸರ್ಜಾ ವಿಡಿಯೋ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!