ಜಾತಿಗಣತಿ ಕುರಿತು ನಮಗೆ ತಿಳಿದಿಲ್ಲ: ಸಿದ್ದಲಿಂಗ ಸ್ವಾಮೀಜಿ

ಹೊಸದಿಗಂತ ವರದಿ,ತುಮಕೂರು :

ಜಾತಿಗಣತಿ ಬಗ್ಗೆ ನಮಗೆ ತಿಳಿದಿಲ್ಲ. ಯಾರು ಬಂದು ನಮ್ಮನ್ನು ಕೇಳಿಲ್ಲ ಎಂದು ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಜಾತಿ ಗಣತಿ ಮಾಡಿ ಅದರ ಆಧಾರದ ಆರ್ಥಿಕ, ಶೈಕ್ಷಣಿಕ ಹಿನ್ನಲೆ ತಿಳಿದುಕೊಂಡು ಆಯಾಯ ವರ್ಗಗಳಿಗೆ ನ್ಯಾಯ ಒದಗಿಸಬೇಕು ಎಂಬ ಸರ್ಕಾರದ ಕಾರ್ಯ ಶ್ಲಾಘನೀಯ ಆದರೆ ಈಗಿನ ಜಾತಿಗಣತಿ ವರದಿ ವಿಚಾರವಾಗಿ ಬಹುತೇಕ ಮಂದಿ ನಮಗೆ ಗೊತ್ತಿಲ್ಲ, ನಮ್ಮ ಮನೆಗೆ ಬಂದಿಲ್ಲ, ನಮ್ಮನ್ನು ಕೇಳಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ನೋಡಿದರೆ ಎಲ್ಲೋ ಒಂದು ಕಡೆ ಜಾತಿಗಣತಿ ಎಲ್ಲರನ್ನು ತಲುಪಿಲ್ಲ ಎಂಬುದು ಅರ್ಥವಾಗುತ್ತದೆ. ಸರ್ಕಾರ ಈ ಗೊಂದಲವನ್ನು ನಿವಾರಣೆ ಮಾಡಿ , ಪ್ರತಿಯೊಬ್ಬರನ್ನು ಭೇಟಿ ಮಾಡಿ, ಎಲ್ಲರಿಗೂ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಎಂದರು.

ಎಲ್ಲ ಸಮಾಜದಲ್ಲಿಯೂ ಬಡವರಿದ್ದಾರೆ, ಹಿಂದುಳಿದವರು ಇದ್ದಾರೆ, ನಿರ್ಗತಿಕರು ಇದ್ದಾರೆ . ಅವರಲ್ಲರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ. ಅವರಿಗೆ ನೌಕರಿ, ಉತ್ತಮ ಶಿಕ್ಷಣ ನೀಡಬೇಕಿದೆ. ಇದೆಲ್ಲವೂ ಆದಾಗ ಸ್ವಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಅಸಮಾನತೆ ಹೋಗಲಾಡಿಸಬೇಕು, ಸಮಾನತೆ ತರಬೇಕು , ಹಿಂದುಳಿದವರನ್ನು ಮುಂದೆ ತರಬೇಕು, ಬಡವರನ್ನು ಮೇಲೆತ್ತಬೇಕು ಎಂಬುದು ಒಳ್ಳೆಯ ಉದ್ದೇಶ. ಸಂವಿಧಾನದ ನೀತಿ ಸಹ ಇದೇ ಆಗಿದೆ. ಆದ್ದರಿಂದ ಸರ್ಕಾರ ಪ್ರತಿಯೊಬ್ಬರನ್ನು ವಿಚಾರ ಮಾಡಿ ಆ ಮೂಲಕ ಮುಂದಿನ ಕ್ರಮ ಕೈಗೊಳ್ಳಲಿ ಎಂಬುದು ನಮ್ಮ ಅಭಿಪ್ರಾಯ. ೧೦ ವರ್ಷದಿಂದ ಇಟ್ಟುಕೊಂಡು ಹೀಗ ಏಕೆ ಪ್ರಕಟ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ೧೦ ವರ್ಷದಲ್ಲಿ ಬದಲಾವಣೆಯಾಗಿರುತ್ತದೆ. ಜನಸಂಖ್ಯೆ ಹೆಚ್ಚಳವಾಗಿರುತ್ತದೆ, ವ್ಯತ್ಯಾಸ ವಾಗಿರುತ್ತದೆ. ೧೦ ವರ್ಷದ ಹಿಂದಿನ ವರದಿಯನ್ನು ಈಗ ಜಾರಿ ಮಾಡುವುದು ಉಚಿತವಾದುದಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!