ನಾವು ಮೂರನೇ ಬಾರಿಗೆ ಸರ್ಕಾರ ರಚಿಸಿದ್ದೇವೆ, ಆದ್ರೆ ಕಾಂಗ್ರೆಸ್ 100 ಸೀಟು ಗೆದ್ದಿಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದರು.
ಈ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್‌ ಈ ಬಾರಿ 100 ಕ್ಷೇತ್ರಗಳನ್ನೂ ಗೆದ್ದಿಲ್ಲ. ನಾವು ಮೂರನೇ ಬಾರಿಗೆ ಸರ್ಕಾರ ರಚಿಸಿದ್ದೇವೆ ಎಂದು ಕುಟುಕಿದರು.

ದೇಶದಲ್ಲಿ ಮೂರನೇ ಬಾರಿಗೆ ಆಡಳಿತಕ್ಕೆ ಬರುವುದು ಸುಲಭವಲ್ಲ. ಜನರ ಪರವಾದ ಆಡಳಿತವನ್ನೇ ತಪಸ್ಸಿನ ರೀತಿ ಮಾಡಿದ ಕಾರಣದಿಂದಾಗಿ ನಮಗೆ ದೇಶದ ಜನ ಮೂರನೇ ಬಾರಿಗೆ ಅವಕಾಶ ನೀಡಿದ್ದಾರೆ. ಕಳೆದ 60 ವರ್ಷಗಳಲ್ಲಿಯೇ ದೇಶದ ಜನರು ಯಾರನ್ನೂ ಮೂರನೇ ಬಾರಿಗೆ ಆಯ್ಕೆ ಮಾಡಿಲ್ಲ. ನಮ್ಮ ಮೇಲಿನ ಭರವಸೆ, ನಂಬಿಕೆಯಿಂದಲೇ ಮೂರನೇ ಬಾರಿಗೆ ಗೆಲ್ಲಿಸಿದ್ದಾರೆ ಎಂದು ಹೇಳಿದರು.

ದೇಶದ ಜನರು ಕಾಂಗ್ರೆಸ್‌ಗೆ ಒಂದು ಜನಾದೇಶ ನೀಡಿದ್ದಾರೆ. ನೀವು ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಿ, ಹೀಗೆಯೇ ಗಲಾಟೆ ಮಾಡಿ, ಕಿರುಚುತ್ತಲೇ ಇರಿ ಎಂಬುದು ಜನರ ಆದೇಶವಾಗಿದೆ. ಕಾಂಗ್ರೆಸ್‌ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸತತ ಮೂರನೇ ಅವಧಿಗೆ ಕಾಂಗ್ರೆಸ್‌ 100 ಸೀಟುಗಳನ್ನು ಕೂಡ ಗೆಲ್ಲುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಇದು ಮೂರನೇ ಅತಿ ದೊಡ್ಡ ಸೋಲಾಗಿದೆ. ಮೂರನೇ ಕಳಪೆ ಪ್ರದರ್ಶನವಾಗಿದೆ ಎಂದು ಗುಡುಗಿದರು.

ಮುಂದಿನ 5 ವರ್ಷಗಳಲ್ಲಿ ನಾವು ನಮ್ಮ ಹಿಂದಿನ ಎಲ್ಲ ರೆಕಾರ್ಡ್‌ಗಳನ್ನು ಮುರಿಯುತ್ತೇವೆ. ಇನ್ನೂ ಮೂರು ಕೋಟಿ ಬಡವರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿಕೊಡುತ್ತೇವೆ. ದೇಶದ ಬಡವರು, ರೈತರು, ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ದುಡಿಯುತ್ತೇವೆ. ವಿಕಸಿತ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುತ್ತೇವೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್ ತತ್ವದಲ್ಲಿ ಆಡಳಿತ ನಡೆಸುತ್ತೇವೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಜತೆಗೆ ನಾಲ್ಕು ರಾಜ್ಯಗಳ ಚುನಾವಣೆಗಳು ನಡೆದಿವೆ. ನಾಲ್ಕು ರಾಜ್ಯಗಳಲ್ಲಿ ಎನ್‌ಡಿಎ ಅಭೂತಪೂರ್ವ ಯಶಸ್ಸು ಕಂಡಿದೆ. ಮಹಾಪ್ರಭು ಜಗನ್ನಾಥನ ನಾಡು ಒಡಿಶಾ ನಮಗೆ ಆಶೀರ್ವಾದ ಮಾಡಿದೆ. ಆಂಧ್ರಪ್ರದೇಶದಲ್ಲಿ ಎನ್‌ಡಿಎ ಕ್ಲೀನ್ ಸ್ವೀಪ್ ಆಗಿದೆ. ಅರುಣಾಚಲ ಪ್ರದೇಶದಲ್ಲಿ ಮತ್ತು ಸಿಕ್ಕಿಂ, ಆರು ತಿಂಗಳ ಹಿಂದೆ ನಾವು ರಾಜಸ್ಥಾನ, ಎಂಪಿ ಮತ್ತು ಛತ್ತೀಸ್‌ಗಢವನ್ನು ಗೆದ್ದಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!