ಹೊಸದಿಗಂತ ಡಿಜಿಟಲ್ ಡೆಸ್ಕ್:
ಬದಿಯಡ್ಕ: ಬೇಕುಗಳು ಬೇಡವಾದಾಗ ಆಗ್ರಹಗಳು ಕಡಿಮೆಯಾಗುತ್ತದೆ. ಸರಳ ವ್ಯಕ್ತಿತ್ವದ ಮೂಲಕ ನಮ್ಮ ಯೋಗ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂಬ ಜವಾಬ್ದಾರಿಯನ್ನು ಪ್ರತಿಯೊಬ್ಬರಿಗೂ ನೀಡಲಾಗುತ್ತದೆ. ಅನುಭವವನ್ನು ಪಡೆದು ಜವಾಬ್ದಾರಿಯನ್ನು ದಕ್ಷವಾಗಿ ನಿರ್ವಹಿಸಬೇಕು. ಪ್ರತಿಯೊಬ್ಬನೂ ಆತನಿಗೆ ನೀಡಿದ ಕೆಲಸವನ್ನು ಶ್ರದ್ಧೆಯಿಂದ ನಿಭಾಯಿಸಿದಾಗ ಸಂಸ್ಥೆ ಹಾಗೂ ನಾವು ಬೆಳೆಯಲು ಸಾಧ್ಯವಿದೆ. ಇಂದು ಕೇರಳ ರಾಜ್ಯದಲ್ಲಿ ಸಹಕಾರ ಭಾರತಿಯ ಸಂಘಟನೆಯು ವ್ಯವಸ್ಥಿತವಾಗಿ ಬೆಳೆಯುತ್ತದೆ ಎಂದು ಸಹಕಾರ ಭಾರತಿ ಅಖಿಲ ಭಾರತ ಮಾಜಿ ಪ್ರಧಾನ ಕಾರ್ಯದರ್ಶಿ, ಸಹಕಾರಿ ರತ್ನ ಕೊಂಕೋಡಿ ಪದ್ಮನಾಭ ತಿಳಿಸಿದರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಜರಗಿದ ಸಹಕಾರ ಭಾರತಿ ಕಾಸರಗೋಡು ಜಿಲ್ಲೆಯ ಅಭ್ಯಾಸ ವರ್ಗ ಮತ್ತು ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತಾಡಿದರು. ಇದೇ ಸಂದರ್ಭದಲ್ಲಿ ಅವರನ್ನು ಜಿಲ್ಲಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಸಂಘಟಕ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಹಕಾರಿಗಳಾದ ತಲೆಂಗಳ ನಾರಾಯಣ ಭಟ್, ಸಿ.ಟಿ.ಹೆಬ್ಬಾರ್, ಟಿ. ಭರತನ್, ನಟರಾಜ ನಾಯಕ್, ನಾರಾಯಣ ಬಂಟ, ಪತ್ತಡ್ಕ ಗಣಪತಿ ಭಟ್, ಡಿ.ಕೃಷ್ಣ ಭಟ್ ದೊಡ್ಡಮಾಣಿ ಅವರನ್ನು ಸನ್ಮಾನಿಸಲಾಯಿತು. ಸಹಕಾರ ಭಾರತಿ ಕೇರಳ ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು, ಅಭಿನಂದನಾ ಭಾಷಣ ಮಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಮೋಹನಚಂದ್ರನ್ ಸಮಾರೋಪ ಭಾಷಣ ಮಾಡಿದರು. ಮಾನ್ಯ ಮಂಗಳೂರು ವಿಭಾಗ ಸಂಘಚಾಲಕ ಗೋಪಾಲ ಚೆಟ್ಟಿಯಾರ್ ಸಹಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಅಖಿಲ ಭಾರತ ಸಮಿತಿ ಸದಸ್ಯ ವಕೀಲ ಕೆ.ಕರುಣಾಕರನ್ ನಂಬ್ಯಾರ್, ರಾಜ್ಯ ಅಧ್ಯಕ್ಷ ಪಿ.ಸುಧಾಕರನ್, ಸಂಘಟನಾ ಕಾರ್ಯದರ್ಶಿ ಕೆ.ಆರ್.ಕಣ್ಣನ್, ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ಸಹಕಾರಭಾರತಿ ಜಿಲ್ಲಾ ಅಧ್ಯಕ್ಷ ಗಣೇಶ್ ಪಾರೆಕಟ್ಟೆ, ಕೋ ಓಪರೇಟಿವ್ ಮಹಿಳಾ ಸೆಲ್ ಪ್ರಮುಖ್ ಶೋಭನಾ ಕಾಳ್ಯಂಗಾಡು ಉಪಸ್ಥಿತರಿದ್ದರು. ಸಂಘಟಕ ಸಮಿತಿ ಸಹಸಂಚಾಲಕ ಅಶೋಕ ಬಾಡೂರು ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ವಿಘ್ನೇಶ್ವರ ಕೆದುಕೋಡಿ ವಂದಿಸಿದರು.