October 9, 2026
Friday, October 9, 2026
spot_img

‘ವರ್ಷಕ್ಕೆ 2,000 ಕೋಟಿ ರೂ. ವಹಿವಾಟು ಇದೆ, 2 ಕೋಟಿ ರೂ. ನಮಗೆ ದೊಡ್ಡ ವಿಷ್ಯಾನೇ ಅಲ್ಲ’: ಜಾರಕಿಹೊಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ಹಾಗೂ ಆಪ್ತರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ಶೋಧಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ವಾರ್ಷಿಕ ವಹಿವಾಟು 2,000 ಕೋಟಿಗೂ ಅಧಿಕ ಇದೆ

ನಮ್ಮ ವಾರ್ಷಿಕ ವಹಿವಾಟು 2,000 ಕೋಟಿಗೂ ಅಧಿಕವಾಗಿದೆ. ಈಗ ಪತ್ತೆಯಾದದ್ದು 2 ಕೋಟಿ ನಗದು ದೊಡ್ಡ ಮೊತ್ತವೇ ಅಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ನಾನು ಕಾನೂನುಬದ್ಧವಾಗಿಯೇ ತನಿಖೆಯನ್ನು ಎದುರಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಟ್ರೇಡಿಂಗ್ ಕಂಪನಿ ಆರಂಭಿಸಲು ಯೋಜನೆ

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, 2 ಕೋಟಿ ನಗದು ತಮ್ಮದೇ ಆಗಿದ್ದು, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಕಾನೂನುಬದ್ಧವಾಗಿ ಕ್ಲೈಮ್ ಮಾಡುತ್ತೇನೆ ಎಂದು ಹೇಳಿದರು. ವಿದೇಶಿ ಹೂಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದ್ದು, ಆಫ್ರಿಕಾದಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಕಂಪನಿ ಆರಂಭಿಸಲು ಯೋಜನೆ ರೂಪಿಸಿದ್ದೇವೆ. ಈ ಸಂಬಂಧ ತಮ್ಮ ಮಗ ಮತ್ತು ಮಗಳ ಹೆಸರಿನಲ್ಲಿ ಕಂಪನಿ ಸ್ಥಾಪಿಸಲಾಗಿದ್ದು, ಹೂಡಿಕೆ ಮಾಡುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:

ವಿದೇಶಿ ಹೂಡಿಕೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಈಗಾಗಲೇ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾಗಿದೆ. ಇಡಿ ಅಧಿಕಾರಿಗಳು ಕೇಳಿದರೆ ಅವುಗಳನ್ನು ನೀಡುವುದಾಗಿ ಸತೀಶ್ ಜಾರಕಿಹೊಳಿ ಹೇಳಿದರು.

ಕಾನೂನುಬದ್ಧವಾಗಿ ಹೋರಾಟ ಮಾಡುತ್ತೇನೆ

ಇನ್ನು ಇಡಿ ದಾಳಿಗಳನ್ನು ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ನಡೆಸಲಾಗುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ಈ ವಿಚಾರದಲ್ಲಿ ಯಾರ ಹೆಸರನ್ನು ಬಳಸದೆ, ಕಾನೂನುಬದ್ಧವಾಗಿ ಹೋರಾಟ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

Must Read