September 2, 2026
Wednesday, September 2, 2026
spot_img

ಮೂರು ಕಾಲು ವರ್ಷಗಳಿಂದ ನಿಮ್ಮ ಯೋಗ್ಯತೆ ನೋಡಿಕೊಂಡು ಬಂದಿದ್ದೇವೆ: ಬಿ.ವೈ ವಿಜಯೇಂದ್ರ

ಹೊಸದಿಗಂತ ವರದಿ ರಾಯಚೂರು:

ರಾಜ್ಯದಲ್ಲಿನ ದಲಿತರಿಗೆ ಮತ್ತು ಹಿಂದುಳಿದ ಸಮುದಾಯಗಳಿಗೆ ನ್ಯಾಯ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋಣ, ಜನ ತೀರ್ಮಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬುಧವಾರ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕಲ್ಲೂರು ಗ್ರಾಮದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದಲಿತವಿರೋಧಿ, ಮಹಿಳಾ ವಿರೋಧಿ ನೀತಿಗಳು ಸೇರಿದಂತೆ ಇತರೆ ವಿರೋಧಿ ನೀತಿಯನ್ನು ಖಂಡಿಸಿ ಬಳ್ಳಾರಿ ಚಲೋ ಎರಡನೇ ದಿನದ ಪಾದಯಾತ್ರೆ ಆರಂಭಿಸುವುದಕ್ಕೂ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಿಮ್ಮ ಯೋಗ್ಯತೆಗೆ ಕಳೆದ ಮೂರು ಕಾಲು ವರ್ಷಗಳಲ್ಲಿ ದಲಿತ ಸಮುದಾಯಗಳ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಎಲ್ಲರನ್ನೂ ಕೂಡ ಸಂಪೂರ್ಣವಾಗಿ ನಿರ್ಲಕ್ಷ ಮಾಡಿದ್ದೀರಿ. ಈ ಸಮುದಾಯದವರೊಂದಿಗೆ ಹುಡುಗಾಟಿಕೆ ಮಾಡುವುದನ್ನು ಬಿಟ್ಟು ನ್ಯಾಯ ಕೊಡಿ. ನಿಮ್ಮಿಂದ ಕೊಡೋದಕ್ಕೆ ಸಾಧ್ಯ ಆಗಲ್ಲ ಅಂದರೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋಣ ಆಗ ನಿಮ್ಮ ಬಣ್ಣ ತಿಳಿಯುತ್ತದೆ ಎಂದು ಸವಾಲು ಹಾಕಿದರು.

ಮೂರು ವಿಕೆಟ್‌ ಉರುಳುತ್ತದೆ

ನಾವು ಒಂದೇ ವಿಕೆಟ್ ಅಂದುಕೊಂಡಿದ್ದೆವು ಆದರೆ ಭ್ರಷ್ಟಾಚಾರ ವಿಚಾರದಲ್ಲಿ ಇನ್ನು ಎರಡು ಮೂರು ವಿಕೆಟಗಳು ಉರುಳುವುದಕ್ಕೆ ತಯಾರಾದಂತೆ ಕಾಣುತ್ತಿದೆ. ಈ ಕುರಿತು ಮುಂದಿನ ದಿನಗಳಲ್ಲಿ ನಿಮಗೆ ಗೊತ್ತಾಗುತ್ತೆ. ಇಷ್ಟು ಮಾತ್ರ ಹೇಳುತ್ತೇನೆ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಏನು ಇಲ್ಲ ಎಂದರು. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಹವಾನಿಯಂತ್ರಿತ ಕೊಠಡಿಯಿಂದ ಹೊರ ಬರದ ಮುಖ್ಯಮಂತ್ರಿಗಳು ಸೇರಿದಂತೆ ಸಂಪುಟದ ಇತರೆ ಸದಸ್ಯರು, ಕಾಂಗ್ರೆಸ್ ನಾಯಕರು ಬಿಜೆಪಿ ಪಾದಯಾತ್ರೆಯಿಂದ ಮುಖ್ಯಮಂತ್ರಿಗಳು ಬರ ಸಮೀಕ್ಷೆಗೆ ಹೊರ ಬರುವಂತಾಗುವ ಮೂಲಕ ನಮಗೆ ಎರಡನೇ ಜಯ ದೊರೆತಂತಾಗಿದೆ. ನಿನ್ನೆ ಮುಖ್ಯಮಂತ್ರಿಗಳು ಗದಗಿಗೆ ಭೇಟಿ ಕೊಟ್ಟಿದ್ದರೆ ಡಿಸಿಎಂ ಮೈಸೂರು ಹೋಗಿದ್ದಾರೆ ಎಂದರು. ನಮ್ಮ ಹೋರಾಟದ ಪರಿಣಾಮ ಎಸಿ ಹಾಲ್, ವಿಧಾನಸೌಧ ಬಿಟ್ಟು ಹೊರ ಬಂದು ರೈತರ ಸಮಸ್ಯೆ ಆಲಿಸಲೇಬೇಕಾದ ವಾತವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು. ಆನೆ ನಡೆದಿದ್ದೇ ದಾರಿ ಅನ್ನುವ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರದ್ದಾಗಿದೆ. ಹೀಗಾಗಿ ಬಿಜೆಪಿ ಪಕ್ಷಕ್ಕೆ ಅನಿವಾರ್ಯವಾಗಿ ನಾವು ಹೋರಾಟಕ್ಕೆ ಇಳಿಯಬೇಕಾಗಿದೆ ಅಂದರು. ರೈತರು ಬೀದಿಗಿಳಿಸಿದ್ದಾರೆ, ಈ ಭಾಗದ ರೈತರ ಜ್ವಲಂತ ಸಮಸ್ಯೆಗಳನ್ನ ಅರ್ಥಮಾಡಿಕೊಳ್ಳುವ ಕನಿಷ್ಠ ಸೌಜನ್ಯವು ಸಿಎಂ ಅವರಿಗಿಲ್ಲ.

ರೈತ ಮಹಿಳೆ ಜತೆ ಮಾತುಕತೆ

ಅಂಕುಶದೊಡ್ಡಿ ಗ್ರಾಮದಿಂದ ಮುದೋಳ ಕ್ರಾಸ ಬಳಿಯ ಹತ್ತಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕೃಷಿ ಕಾರ್ಮಿಕರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿದರು. ಹತ್ತಿ ಬೆಳೆ ಹಾಗೂ ಇಳುವರಿ ಕುರಿತು ವಿಚಾರಿಸಿದರು. ಈ ಸಂದರ್ಭಲ್ಲಿ ಮಹಿಳಾ ಕಾರ್ಮಿಕರು ಮಳೆ ಇಲ್ಲದೆ ನಮ್ಮ ಬೆಳೆ ಎಲ್ಲ ಹಾಳಾಗಿವೆ ಪರಿಹಾರವನ್ನಾದರೂ ಕೊಡಿ ಎಂದು ಕೇಳಿಕೊಂಡರು. ನಮ್ಮ ಪಾದಯಾತ್ರೆ ರೈತರ ಸಂಕಷ್ಟಕ್ಕೆ ನ್ಯಾಯ ದೊರೆಯಲಿ ಎನ್ನುವುದೇ ಆಗಿದೆ. ನಿಮಗೆ ಪರಿಹಾರ ಕೊಡಿಸುವವರೆಗೂ ನಿರಂತರವಾಗಿ ಹೋರಾಡುತ್ತಿರುತ್ತೇವೆ ಎಂದು ಭರವಸೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !