ಹೊಸದಿಗಂತ ವರದಿ, ಹುಬ್ಬಳ್ಳಿ:
ಕೋಮು ಗಲಭೆ ಸೃಷ್ಟಿಸುವಂತ ದುಷ್ಕರ್ಮಿಗಳಿಂದ ಸಮಾಜ ಜಾಗೃತಿಯಾಗಬೇಕು. ಇಂತಹ ದುಷ್ಕೃತ್ಯ ನಡೆಸುವ ಶಕ್ತಿಗಳ ಮಟ್ಟ ಹಾಕಲು ನಮ್ಮ ಸರ್ಕಾರ ಗಟ್ಟಿಯಾದ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ನಾಗಮಂಗಲ ಘಟನೆಯ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಮಾಡುವ ದುಷ್ಟ ಶಕ್ತಿಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು. ಎಲ್ಲ ಪಕ್ಷಗಳ ಸಾಮಾಜಿಕ ಕಳಕಳಿಯನ್ನು ಮರೆಯಬಾರದು. ಶಾಂತಿ ಪ್ರಿಯ ಹಾಗೂ ಸರ್ವಜನಾಂಗದವರು ಒಂದೇ ಎಂಬ ರಾಜ್ಯಕ್ಕೆ ತೊಂದರೆ ಉಂಟು ಮಾಡಬಾರದು ಎಂದರು.
ಬಿಜೆಪಿ ಶಾಸಕ ಮುನಿರತ್ನ ಅವರ ಲಂಚದ ಬೇಡಿಕೆ ಹಾಗೂ ಜಾತಿ ನಿಧನೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಪ್ರಕರಣಗಳ ಬೆಂಬಲಿಸುವ ಮನಸ್ಸು ಯಾಕೆ ಬರುತ್ತದೆ ಗೊತ್ತಿಲ್ಲ. ಹೆಣ್ಣು ಮಕ್ಕಳ ಬಹಳ ಕನಿಷ್ಠವಾಗಿ ನೋಡಿದ್ದಾರೆ. ಮುನಿರತ್ನ ತಪ್ಪು ಮಾಡದಿದ್ದರೆ ಬಿಜೆಪಿ ಯಾಕೆ ನೋಟಿಸ್ ನೀಡಿದೆ. ಅಂತವರನ್ನು ಯಾಕೆ ಬೆಂಬಲಿಸಲಾಗುತ್ತದೆ. ಅವರ ರಕ್ಷಣೆ ಮಾಡುತ್ತಿರುವ ಹಿಂದಿನ ಉದ್ದೇಶವೇನು? ಅವರ ತಪ್ಪು ಕಣ್ಣು ಮುಂದೆ ಇದ್ದು, ಅದಕ್ಕೆ ಸಹಕಾರ ನೀಡುವುದು ಸರಿಯಲ್ಲ ಎಂದು ಸಂಸದ ಜಗದೀಶ ಶೆಟ್ಟರ್ ಗೆ ತಿರಗೇಟು ನೀಡಿದರು.
ಪ್ರವಾಸೋದ್ಯಮ ನೀತಿ ಅಂತಿಮ ಹಂತದಲ್ಲಿದ್ದು, ಒಂದು ತಿಂಗಳೊಳಗಾಗಿ ಹೊಸ ಹೊರ ಬರಲಿದೆ. ರಾಜ್ಯದ ಪ್ರಮುಖ ಪ್ರವಾಸ ಸ್ಥಳಗಳಲ್ಲಿ ಗೈಡ್ಸ್‌ಗಳ ನೇಮಕ ಮಾಡಲಾಗುತ್ತಿದೆ ಎಂದು ಹೇಳಿದರು.