ಹೊಸ ದಿಗಂತ ವರದಿ,ದಾವಣಗೆರೆ:
ಎರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದವರು ಯಾರೂ ರಾಜೀನಾಮೆ ಕೊಡುವುದಿಲ್ಲ. ಸಿ.ಎಲ್.ಪಿ ಸಭೆಯಲ್ಲಿ ಸುಮ್ಮನಿರುವವರು ಮಾಧ್ಯಮಗಳ ಮುಂದೆ ಮಾತಾಡುತ್ತಾರಷ್ಟೇ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ.ಶಿವಗಂಗಾ ತಮ್ಮದೇ ಪಕ್ಷದ ಅತೃಪ್ತ ಶಾಸಕರ ಬಗ್ಗೆ ಬೇಸರ ಹೊರಹಾಕಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜು ಕಾಗೆ ಹೀಗೆ ರಾಜೀನಾಮೆ ಕೊಡುತ್ತೇನೆಂದು 2-3 ಸಲ ಹೇಳಿರಬೇಕು. ಏನಾದರೂ ವಿಚಾರವಿದ್ದರೆ ಸಿ.ಎಲ್.ಪಿ ಸಭೆಯಲ್ಲೇ ಮಾತಾಡಬೇಕು. ಅಲ್ಲಿ ಯಾರಾದರೂ ಹುಲಿ, ಸಿಂಹ ತಂದಿರುತ್ತಾರಾ? ಸಭೆಯಲ್ಲಿ ಸುಮ್ಮನೇ ಕುಳಿತು, ಹೊರಗೆ ಬಂದು ಮಾಧ್ಯಮಗಳ ಮುಂದೆ ಮಾತಾಡುವುದಲ್ಲ. ಎಂದು ಸ್ವಪಕ್ಷದ ಶಾಸಕ ರಾಜು ಕಾಗೆ ಹೇಳಿಕೆಗೆ ಪ್ರತಿಕ್ರಿಯಿಸಿದರು.
ನಮ್ಮ ಸರ್ಕಾರ ಸುಭದ್ರವಾಗಿಯೇ ಇದೆ. ಸರ್ಕಾರ ಉತ್ತಮವಾದ ಕೆಲಸ ಮಾಡುತ್ತಿದೆ. ದಾವಣಗೆರೆಯಲ್ಲಿ ಇತ್ತೀಚೆಗೆ ಸಾವಿರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ನಾನೇ ಪ್ರತಿ ವಾರ ನನ್ನ ಕ್ಷೇತ್ರದಲ್ಲಿ ೧.೫ ಕೋಟಿ ರೂ. ವೆಚ್ಚದ ಅಬಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡುತ್ತೇನೆ. ಅನುದಾನ ಇಲ್ಲದೇ ಇದೆಲ್ಲಾ ಹೇಗೆ ಸಾದ್ಯ? 3-4 ಜನ ಹಿರಿಯರು ಮಾತಾಡಿದ್ದಾರೆ. ಏನೇ ಇದ್ದರೂ ಸಿ.ಎಲ್.ಪಿ ಸಭೆಯಲ್ಲಿ ಮಾತಾಡಬೇಕು. ಸಭೆಯಲ್ಲಿ ಮೌನವಾಗಿದ್ದು, ಹೊರಗೆ ಬಂದು ಮಾತಾಡಿದರೆ ವಿಪಕ್ಷಗಳಿಗೆ ನಾವೇ ಅಸ್ತ್ರ ಕೊಟ್ಟಂತಾಗುತ್ತದೆ. ಎಲ್ಲರ ಮನೆಯಲ್ಲೂ ಅಸಮಾಧಾನ ಇದ್ದೇ ಇರುತ್ತದೆ. ಕಾಂಗ್ರೆಸ್ ಕುಟುಂಬದಲ್ಲಿ ಒಂದಿಷ್ಟು ಹೆಚ್ಚು ಕಡಿಮೆ ಇರುವುದು ಸಹಜ. ಸರ್ಕಾರದ ಪರವಾಗಿ ನಾವೆಲ್ಲಾ ಶಾಸಕರು ನಿಲ್ಲಬೇಕು ಎಂದು ಅವರು ಸಲಹೆ ನೀಡಿದರು.
ವಿಧಾನಸಭೆ ಚುನಾವಣೆಯಲ್ಲಿ ನಾವು ಗೆದ್ದಿದ್ದು, ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವೇ ಜಯ ಗಳಿಸಿದೆ. ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಲ್ಲಿ ಒಂದನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಬೇಕು. ರಾಜ್ಯದಲ್ಲಿ ವೀರಶೈವ ಲಿಂಗಾಯತ ಪ್ರಬಲ ಕೋಮು ಇದ್ದು, ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದ ಸಮುದಾಯ ಇದೀಗ ಕಾಂಗ್ರೆಸ್ ಪಕ್ಷದ ಕಡೆಗೆ ಬಂದಿದೆ. ಹಾಗಾಗಿ ಸಮುದಾಯವನ್ನು ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಳ್ಳುವ ಕೆಲಸ ಆಗಬೇಕು. ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕೆಂದರೆ ವೀರಶೈವ ಲಿಂಗಾಯತ ಸಮಾಜಕ್ಕೆ ಅವಕಾಶ ನೀಡಬೇಕು ಎಂದರಲ್ಲದೆ, ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ನಾನು ಹಿಂದೆಯೇ ಹೇಳಿದ್ದೇನೆ. ಡಿಸೆಂಬರ್ ಬಳಿಕ ಅದರ ಬಗ್ಗೆ ಮಾತಾಡುವೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.