April 30, 2026
Thursday, April 30, 2026
spot_img

ನಮಗೂ ಬುದ್ಧಿಯಿದೆ, ಪ್ರಕೃತಿಗೂ ಬುದ್ಧಿಯಿದೆ! ನದಿ ತಿರುವು ಯೋಜನೆಗೆ ಶಿರಸಿಯಲ್ಲಿ ಜನಾಕ್ರೋಶ

ಹೊಸದಿಗಂತ ಶಿರಸಿ:

“ನಾವೇನು ಸರ್ಕಾರವನ್ನು ತಾಜ್‌ಮಹಲ್ ಕಟ್ಟಿಕೊಡಿ ಎಂದು ಕೇಳಿಲ್ಲ, ಕೇಳಿದ್ದು ಕೇವಲ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ. ಜನರ ಜೀವ ಉಳಿಸಲು ಮನಸ್ಸಿಲ್ಲದ ಸರ್ಕಾರಕ್ಕೆ, ನಮ್ಮ ನದಿಗಳನ್ನು ತಿರುಗಿಸುವ ಯೋಜನೆಗಳನ್ನು ಹೇರಲು ಮಾತ್ರ ಉತ್ಸಾಹವೇಕೆ?” – ಹೀಗೆಂದು ಖ್ಯಾತ ಪರಿಸರ ತಜ್ಞ ಬಿ.ಎಂ. ರವಿಕುಮಾರಸ್ವಾಮಿ ಅವರು ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ಶಿರಸಿಯಲ್ಲಿ ಆಯೋಜಿಸಲಾಗಿದ್ದ ಬೇಡ್ತಿ-ಅಘನಾಶಿನಿ ಬೃಹತ್ ಜನಸಮಾವೇಶದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮೂಲಭೂತ ಅವಶ್ಯಕತೆಗಳನ್ನು ನಿರ್ಲಕ್ಷಿಸಿ, ಪರಿಸರಕ್ಕೆ ಮಾರಕವಾದ ಯೋಜನೆಗಳನ್ನು ಜಾರಿಗೆ ತರುತ್ತಿರುವ ರಾಜಕಾರಣಿಗಳ ನಡೆಯನ್ನು ಕಟುವಾಗಿ ಟೀಕಿಸಿದರು.

“ಜಿಲ್ಲೆಯ ಜನರು ತೆರಿಗೆ ಪಾವತಿಸುವ ನಾಗರಿಕರಲ್ಲವೇ? ನಮಗೆ ಬೇಕಾದ ಆರೋಗ್ಯ ಸೌಲಭ್ಯ ನೀಡದ ಸರ್ಕಾರಕ್ಕೆ ನಮ್ಮ ನೀರನ್ನು ಕೊಂಡೊಯ್ಯುವ ಹಕ್ಕು ಎಲ್ಲಿದೆ?” ಎಂದು ಅವರು ಪ್ರಶ್ನಿಸಿದರು.

ನದಿ ನೀರು ಸಮುದ್ರ ಸೇರುವುದು ವ್ಯರ್ಥ ಎಂಬ ವಾದವನ್ನು “ಮೂರ್ಖತನ” ಎಂದು ಕರೆದ ಅವರು, “ನದಿ ನೀರು ಸಮುದ್ರ ಸೇರಿ ಆವಿಯಾಗಿ ಮಳೆಯಾಗುವುದು ನಿಸರ್ಗದ ಜಲಚಕ್ರ. ಈ ಮೂಲಭೂತ ವಿಜ್ಞಾನ ಮರೆತು ಪ್ರಕೃತಿಯ ಮೇಲೆ ಸವಾರಿ ಮಾಡಲು ಹೊರಟಿರುವುದು ಅಜ್ಞಾನದ ಪರಮಾವಧಿ” ಎಂದು ಎಚ್ಚರಿಸಿದರು.

ನದಿ ಜೋಡಣೆ ಯೋಜನೆಗಳು ಯಶಸ್ವಿಯಾಗುವುದಿಲ್ಲ ಎಂಬುದಕ್ಕೆ ಮಹಾರಾಷ್ಟ್ರದ ಬರಡಾದ ಭೂಮಿಯೇ ಸಾಕ್ಷಿ. ನೈಸರ್ಗಿಕ ಹರಿವನ್ನು ತಡೆದರೆ ಮುಂದೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ರಾಜಕಾರಣಿಗಳು ತಮ್ಮ ಪಕ್ಷದ ನಿಲುವು ಅಥವಾ ವೈಯಕ್ತಿಕ ಹಿತಾಸಕ್ತಿಗಿಂತ ಜನರ ಭಾವನೆಗಳಿಗೆ ಬೆಲೆ ನೀಡಬೇಕು. ಜನರ ಬದುಕಿನ ಜೊತೆ ಚೆಲ್ಲಾಟವಾಡಿದರೆ ಸಹಿಸುವುದಿಲ್ಲ ಎಂದು ಗುಡುಗಿದರು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ ರವಿಕುಮಾರಸ್ವಾಮಿ ಅವರ ಮಾತಿಗೆ ಅಭೂತಪೂರ್ವ ಬೆಂಬಲ ಸೂಚಿಸಿದರು. ಈ ಸಮಾವೇಶವು ಉತ್ತರ ಕನ್ನಡದ ಪರಿಸರ ರಕ್ಷಣೆಯ ಹೋರಾಟಕ್ಕೆ ಹೊಸ ಚೈತನ್ಯ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !