ಮೇಘನಾ ಶೆಟ್ಟಿ, ಶಿವಮೊಗ್ಗ
ಹೊಸ ಜನರೇಷನ್‌ನಲ್ಲಿ ಏನೇನೋ ಟ್ರೆಂಡ್ಸ್ ಬರುತ್ತವೆ. ಕೆಲವೊಮ್ಮೆ ಟ್ರೆಂಡ್ ಲೈಫ್‌ಸ್ಟೈಲ್ ಆಗಿ ಉಳಿದುಬಿಡುತ್ತದೆ. ಅದರಲ್ಲಿ ಈ DINK ಕೂಡ ಒಂದು. ಇದೇನಿದು DINK ನಾವು ಹೆಸರೇ ಕೇಳಿಲ್ಲ ಅಂದುಕೊಳ್ತಿದ್ದೀರಾ? ಹೀಗಂದ್ರೆ Dual Income, No Kids ಅಂತ ಅರ್ಥ. ಇಬ್ಬರ ಸಂಬಳ ಬರುತ್ತದೆ, ಮಕ್ಕಳ ಕಿರಿಕಿರಿ ಇಲ್ಲದೆ ಜೀವನ ನಡೆಸೋದು ಎಂದರ್ಥ!
ಇದೇನಿದು ನಾನ್‌ಸೆನ್ಸ್ ಅನಿಸ್ತಾ ಇರಬಹುದು, ನಮ್ಮ ನಿಮ್ಮ ಕಾಲದಲ್ಲಿ ಮನೆತುಂಬಾ ಮಕ್ಕಳಿರಲಿ ಅಂತಿದ್ರು. ಆ ಕಾಲ ಹೋಗಿ ಈಗ ಅಟ್ಲೀಸ್ಟ್ ಮನೆಯಲ್ಲಿ ಇಬ್ಬರು ಮಕ್ಕಳು ಇರಲೇಬೇಕು ಅಂತ ಓಲ್ಡ್ ಫ್ಯಾಷನ್ ಜನ ಹೇಳ್ತಿದ್ದಾರೆ. ಮ್ಯಾಕ್ಸಿಮಂ ಮಾಡರ್ನ್ ಅಂದ್ರೆ ನಮಗೆ ಒಂದೇ ಮಗು ಸಾಕು, ಅದಕ್ಕೆ ಎಲ್ಲಾ ರೀತಿ ವಿದ್ಯೆ ಬುದ್ಧಿ ಹಣ ಖರ್ಚು ಮಾಡು ಲಕ್ಸುರಿ ಲೈಫ್ ಕೊಡ್ತೀವಿ ಅಂತಾರೆ.

ಆದರೆ ಮಕ್ಕಳೇ ಬೇಡ ಅವ್ರು ಕಿರಿಕಿರಿ ನಮ್ಮ ಫ್ರೀಡಂ ಕಿತ್ಕೋತಾರೆ ಅಂತ ದೊಡ್ಡವರ ಮುಂದೆ ಹೇಳ್ಬಿಟ್ರೆ? ಮನುಷ್ಯತ್ವ ಇಲ್ವಾ? ಏನು ಮಾತಾಡ್ತೀರಿ, ನಮ್ಮ ವಂಶ ಉದ್ದಾರ ಆಗೋದು ಹೇಗೆ? ವಯಸ್ಸಾದ ಮೇಲೆ ಯಾರು ನೋಡ್ಕೋತಾರೆ ಅಂತ ಬೈಸ್ಕೋಬೇಕಾಗತ್ತೆ!
ಈಗಿನ ಜನರೇಷನ್‌ನಲ್ಲಿ DINK ಫೇಮಸ್ ಆಗಿದೆ. ಮಕ್ಕಳನ್ನು ಕಂಡ್ರೆ ಇಷ್ಟ, ಆದರೆ ಅವರು ನಮ್ಮ ಮಕ್ಕಳಾಗಬಾರದು ಅಷ್ಟೇ ಅನ್ನೋರೇ ಜಾಸ್ತಿಯಾಗಿದ್ದಾರೆ. ಗಂಡ ಹೆಂಡತಿ ಇಬ್ಬರೂ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡ್ತಾರೆ. ಇಬ್ಬರಿಗೂ ಲಕ್ಷಗಟ್ಟಲೆ ಸಂಬಳ, ವಯಸ್ಸು ಮೂವತ್ತು! ಮಕ್ಕಳನ್ನು ಹೊರೋದು, ಹೆರೋದು, ಸಾಕೋದು, ಬೆಳೆಸೋದು ಇನ್ನಿತರ ನ್ಯಾಚುರಲ್ ಕೆಲಸಗಳು DINK ಕಪಲ್‌ಗೆ ಕಷ್ಟ ಎನಿಸುತ್ತದೆ. ಅವಶ್ಯಕತೆ ಇಲ್ಲದ್ದು ಎನಿಸುತ್ತದೆ. ಮಕ್ಕಳಿರುವವರ ಕಷ್ಟ ನೋಡಿ ನಾವೆಷ್ಟು ಲಕ್ಕಿ ಎಂದುಕೊಳ್ತಾರೆ.

ಈ ರೀತಿ ನಿರ್ಧಾರ ಮಾಡೋಕೆ ಕಾರಣ ಏನು?
ಮಕ್ಕಳನ್ನು ಸಾಕೋಕೆ ಎಷ್ಟು ಖರ್ಚಾಗುತ್ತದೆ ಎಂದು ಗೊತ್ತಿದ್ಯಾ? ಗರ್ಭಿಣಿ ಆದಾಗಿನಿಂದಲೂ ಹತ್ತಾರು ಹಾಸ್ಪಿಟಲ್ ವಿಸಿಟ್ಸ್, ದುಬಾರಿ ಇಂಜೆಕ್ಷನ್, ಮಾತ್ರೆಗಳು, ಹಣ್ಣು, ತರಕಾರಿ, ಮೊಟ್ಟೆ ಮಾಂಸ ತಿನ್ನಬೇಕು. ಅದನ್ನೂ ಓಕೆ ಬಿಡು ಅಂದುಕೊಂಡ್ರೆ ಡೆಲಿವರಿಗೆ ಹಾಸ್ಪಿಟಲ್‌ಗಳಲ್ಲಿ ಹೊಟೇಲ್‌ಗಳ ರೀತಿ ಪ್ಯಾಕೇಜ್ ಇದೆ. ಲಕ್ಷುರಿ, ಸೆಮಿ ಲಕ್ಷುರಿ ಎಂದು ಲಕ್ಷ ಲಕ್ಷ ಪೀಕುತ್ತಾರೆ. ಇಷ್ಟಾದಮೇಲೆ ಶಾಲೆಯ ಫೀಸ್ ಕೇಳಿದ್ರೆ ತಲೆ ತಿರುಗುತ್ತದೆ. ಅದೆಲ್ಲವನ್ನೂ ಉಳಿಸಿ ತಮ್ಮ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಎಂಜಾಯ್‌ಮೆಂಟ್, ಕ್ವಾಲಿಟಿ ಆಫ್ ಲಿವಿಂಗ್ ಮೇಲೆ ಇನ್ವೆಸ್ಟ್ ಮಾಡ್ತಾರೆ.

ಹೆಣ್ಣುಮಕ್ಕಳು ಮಗು ಆದ ಮೇಲೆ ಕೆಲಸಕ್ಕೆ ಹೋಗುತ್ತಾರೆ. ಆದರೆ ಗಮನ ಮಾತ್ರ ಮಕ್ಕಳ ಮೇಲೆಯೇ ಇರುತ್ತದೆ. ಮನೆಗೆ ಹೋಗೋದಕ್ಕೆ ಅರ್ಜೆಂಟ್ ಮಾಡ್ತಾರೆ. ಕೆಲಸದ ಅವಧಿ ಬಿಟ್ಟು ಹೆಚ್ಚಿನದ್ದು ಏನೂ ಮಾಡೋದಿಲ್ಲ. ಪರಿಸ್ಥಿತಿ ಹೀಗಿರುವಾಗ ಕಂಪನಿಗಳಲ್ಲಿ ಗಂಡಸರನ್ನೇ ಪ್ರಿಫರ್ ಮಾಡುತ್ತಾರೆ. ಪ್ರಮೋಷನ್ ಅವರಿಗೇ ಸಿಗುತ್ತದೆ. ಆದರೆ ಮಕ್ಕಳಿಲ್ಲ ಎಂದರೆ ತಮ್ಮಿಷ್ಟ ಬಂದ ರೀತಿ, ತಮಗಿಷ್ಟದ ಕೆಲಸವನ್ನು ಮಾಡಬಹುದು.

ಈ ರೀತಿ ಲೈಫ್‌ಸ್ಟೈಲ್‌ನ್ನು ಬಹುತೇಕ ಜನರು ಇಷ್ಟಪಡುತ್ತಿದ್ದಾರೆ. ಗಂಡ ಹೆಂಡತಿಯ ನಡುವಿನ ಪ್ರೀತಿ ಮಕ್ಕಳು ಬಂದ ಮೇಲೆ ಬರೀ ಜವಾಬ್ದಾರಿಯಾಗಿ ಉಳಿದುಕೊಳ್ಳುತ್ತದೆ. ಮಕ್ಕಳನ್ನು ಸಾಕೋದು, ದೊಡ್ಡವರನ್ನಾಗಿ ಮಾಡೋ ಮಧ್ಯ ಗಂಡ ಹೆಂಡತಿಯ ಬಾಂಡಿಂಗ್ ಕಡಿಮೆಯಾಗುತ್ತದೆ. ಇದರ ಬಗ್ಗೆ ಹೊಸ ಜನರೇಷನ್‌ಗೆ ಭಯ ಇದೆ. ನಮ್ಮ ಮಧ್ಯೆ ಯಾರೂ ಬರೋದು ಬೇಡ ಅಂತಾರೆ.

ಕಪಲ್‌ಗೆ ಫ್ರೀಡಂ ಸಿಗುತ್ತದೆ. ಇದ್ದಕ್ಕಿದ್ದಂತೆಯೇ ನಾನು ಇಟಲಿಗೆ ಹೋಗ್ಬೇಕು ಎಂದುಕೊಂಡ್ರೆ ಸ್ವಲ್ಪ ದಿನಗಳ ಪ್ಲಾನಿಂಗ್ ನಂತರ ಅವರು ಇಟಲಿಗೆ ಹೋಗುತ್ತಾರೆ. ಆದರೆ ಮಕ್ಕಳಿದ್ದರೆ ಬಾತ್‌ರೂಮ್‌ಗೆ ಹೋಗೋದಕ್ಕೂ ಇನ್ನೊಬ್ಬರ ಸಹಾಯ ಬೇಕು. ಗಂಡ ಹೆಂಡತಿ ಇಬ್ಬರಿಗೂ ಕೆಲಸದ ಲೋಡ್ ಹೆಚ್ಚಾಗುತ್ತದೆ. ಅಜ್ಜ ಅಜ್ಜಿಯ ಸಹಾಯ ಕೇಳೋದಕ್ಕೆ ಕೆಲವರು ಊರು ಬಿಟ್ಟು ಬರೋಕೆ ರೆಡಿ ಇರೋದಿಲ್ಲ. ಇನ್ನು ಹಲವರು ಊರು ಬಿಟ್ಟು ಜೊತೆಯಲ್ಲಿದ್ದರೂ ಸಮಸ್ಯೆಯೇ! ಲೇಟ್ ನೈಟ್ ಪಾರ್ಟಿ, ಔಟಿಂಗ್, ಫ್ರೆಂಡ್ಸ್ ಜೊತೆ ಹ್ಯಾಂಗ್‌ಔಟ್ ಯಾವುದಕ್ಕೂ ಯೋಚನೆ ಮಾಡದೇ ಒಕೆ ಎಂದು ಹೇಳಬಹುದು.

ಹೀಗೆ ಡಿಸೈಡ್ ಮಾಡಿದ್ದು ಯಾಕೆ?
ಸಮಾಜ, ಆಫೀಸ್, ನೆಂಟರಿಷ್ಟರು ಮಕ್ಕಳಿರುವವರನ್ನು ನಡೆಸಿಕೊಳ್ಳುವ ರೀತಿ, ಲೈಫ್‌ನಲ್ಲಿ ಭಾರೀ ಬದಲಾವಣೆ, ಪ್ರೆಗ್ನೆನ್ಸಿ, ಡೆಲಿವರಿ ಹಾಗೂ ಪೋಸ್ಟ್‌ಪಾರ್ಟಮ್ ಸಮಯದಲ್ಲಿ ಪೋಷಕರು, ಪತಿಯ ಪೋಷಕರು ಹಾಗೂ ಪತಿ ನಡೆಸಿಕೊಳ್ಳುವ ರೀತಿ, ದುಡ್ಡು ಖರ್ಚಾಗೋದನ್ನು ತಪ್ಪಿಸಲು, ಈಗಾಗಲೇ ನಮ್ಮ ಜನಸಂಖ್ಯೆ ಜಾಸ್ತಿ ಇದೆ ಎನ್ನುವ ಮನೋಭಾವ, ಜಗತ್ತಿನಲ್ಲಿ ನಡೆಯುವ ಕೊಲೆ, ರೇಪ್, ಕಿಡ್ನಾಪ್ ಇನ್ನಿತರ ಕೆಟ್ಟ ಘಟನೆಗಳು, ಮಕ್ಕಳೆಂದರೆ ಇಷ್ಟ ಇಲ್ಲ, ಒಳ್ಳೆ ಪೋಷಕರಾಗೋದಿಲ್ಲ ಎನ್ನುವ ಮನೋಭಾವದಿಂದ ಮಕ್ಕಳು ಬೇಡ ಎನ್ನುತ್ತಾರೆ.

ಈ DINK ಕಪಲ್ ಏನನ್ನು ಮಿಸ್ ಮಾಡ್ಕೊಳ್ತಾ ಇದ್ದಾರೆ?
ದೇವರು ಹೆಣ್ಣಿಗೆ ಒಂದು ಜೀವವನ್ನು ಬೆಳೆಸುವ ಶಕ್ತಿ ನೀಡಿದ್ದಾನೆ. ಹೊಟ್ಟೆಯೊಳಗೆ ಮಗು ಒದ್ದಾಡುವ ಫೀಲಿಂಗ್, ಒದ್ದಾಗ ಆಗುವ ಖುಷಿ, ಗರ್ಭಿಣಿ ಎಂದು ಮನೆಯವರು ನೀಡುವ ಪ್ರೀತಿಯ ಅನುಭವ ಸಿಗೋದಿಲ್ಲ.

ನಿದ್ದೆಗೆಟ್ಟು, ಮಾನಸಿಕ, ದೈಹಿಕ ಆರೋಗ್ಯ ಹಳ್ಳ ಹಿಡಿದರೂ ಮಗುವಿನ ಒಂದು ನಗು ಎಲ್ಲವನ್ನೂ ಮರೆಸುತ್ತದೆ. ನಿನಗಾಗಿ ನಾನು ಏನಾದ್ರೂ ಮಾಡ್ತೀನಿ ಅನ್ನೋ ಫೀಲಿಂಗ್, ಅಪ್ಪ ಅಮ್ಮನೇ ನನ್ನ ಪ್ರಪಂಚ ಎನ್ನುವ ಮಗುವಿನ ಅಪ್ಪುಗೆ ಎಷ್ಟು ದುಡ್ಡು ಕೊಟ್ರೂ ಸಿಗೋದಿಲ್ಲ.
ಮಕ್ಕಳ ಜತೆಗಿನ ಅತಿಯಾದ ಪ್ರೀತಿ, ಮಗು ಬಂದಾಗ ಎವಾಲ್ವ್ ಆಗುವ ಗಂಡ ಹೆಂಡತಿಯ ಪ್ರೀತಿಯನ್ನು ವರ್ಣಿಸೋಕೆ ಪದಗಳಿಲ್ಲ. ಜೀವನದಲ್ಲಿ ಪರ್ಪಸ್ ಸಿಗುತ್ತದೆ. ಸ್ವಾರ್ಥ ಮರೆತುಹೋಗುತ್ತದೆ. ಜವಾಬ್ದಾರಿ ಹೆಚ್ಚುತ್ತದೆ.
ಗಂಡ ಹೆಂಡತಿ ಇಬ್ಬರೇ ಇರೋದಕ್ಕಿಂತ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಆ ಮನೆಯ ಕಳೆಯೇ ಬೇರೆ. ಯಾವುದೇ ಸಮಾರಂಭ ಇರಲಿ, ಮಕ್ಕಳು ಇದ್ದರೆ ಲಕ್ಷಣ. ಮನುಷ್ಯನ ಗುಣದಲ್ಲೇ ಇರುವ ಕಾಳಜಿ, ಪ್ರೀತಿಯನ್ನು ಇನ್ನೊಂದು ಜನರೇಷನ್‌ಗೆ ನೀಡಬಹುದು.

ಮಕ್ಕಳನ್ನು ಮಾಡಿಕೊಳ್ಳುವುದು, ಮಾಡಿಕೊಳ್ಳದೇ ಇರುವುದು, ಅಡಾಪ್ಟ್ ಮಾಡಿಕೊಳ್ಳುವುದು ಇನ್ನಿತರ ನಿರ್ಧಾರಗಳು ಗಂಡ ಹೆಂಡತಿಗೆ ಬಿಟ್ಟಿದ್ದು. ಟ್ರೆಂಡ್ ಫಾಲೋ ಮಾಡೋಕಾಗಿ, ಇಂದಿನಿ ಫ್ಯಾನ್ಸಿ ಜೀವನ ಮಿಸ್ ಆದ್ರೆ ಅನ್ನೋದಕ್ಕಾಗಿ ನಿರ್ಧಾರ ಮಾಡಬೇಡಿ. ಅವರಿವರ ಮಾತು ಕೇಳದೇ ನಿಮಗೇನು ಬೇಕೋ ಅದನ್ನೇ ಮಾಡಿ. ಮುಂದೊಂದು ದಿನ ನೀವು ಮಾಡಿದ್ದ ನಿರ್ಧಾರಕ್ಕೆ ಪಶ್ಚಾತ್ತಾಪ ಪಡದಿರಿ..



