ಹೊಸದಿಗಂತ ವರದಿ ಶಿವಮೊಗ್ಗ:
ನಗರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಶ್ರೀರಾಮಸೇನೆ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲಿ ಶಿವಮೊಗ್ಗ ಚಲೋ ಕರೆ ನೀಡಲಾಗುತ್ತಿದೆ. ಅಂದು ರಾಜ್ಯದ ವಿವಿಧ ಭಾಗಗಳಿಂದ ಹಿಂದೂಗಳು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಹಿಂದೂಗಳಿಗೆ ಏನೇ ಮಾಡಿದರೂ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತೆ ಒಂದು ಸಮುದಾಯದವರು ವರ್ತಿಸುತ್ತಿದ್ದಾರೆ. ಗಲಾಟೆ ಮಾಡುವ ಪುಂಡ ಪೋಕರಿಗಳು, ರಾಗಿಗುಡ್ಡದಲ್ಲಿ ತಲವಾರ್ ಜಳಪಿಸಿದವರು ತಾಕತ್ತಿದ್ದರೆ ಶಿವಮೊಗ್ಗ ಚಲೋ ದಿನ ಬರಲಿ ಉತ್ತರ ನೀಡುತ್ತೇವೆ ಎಂದರು.
ರಾಗಿಗುಡ್ಡ ಗಲಬೆಗೆ ಸಂಬಂಧಿಸಿದಂತೆ ಸರ್ಕಾರ ನಡೆದುಕೊಂಡ ರೀತಿ ಖಂಡನೀಯ. ಏನೂ ಮಾಡದ 16 ಕುಟುಂಬಗಳ ಮನೆಗಳನ್ನು ಒಡೆಯಲಾಗಿದೆ. ಅವರಿಗೆ ಸಾಂತ್ವನ ಹೇಳಲು ಹೋಗುತ್ತೇವೆಂದು ಹೊರಟರೆ ಪ್ರಮೋದ್ ಮುತಾಲಿಕ್ ಅವರನ್ನು ರಾತ್ರೋರಾತ್ರಿ ಪೊಲೀಸರು ಬಂದಿಸುತ್ತಾರೆ. ರಾತ್ರಿ ಮುತಾಲಿಕ್ ಪ್ರಯಾಣ ಮಾಡುತ್ತಿರುವುದು ಪೊಲೀಸರಿಗೆ ಗೊತ್ತಾಗುತ್ತದೆ. ಆದರೆ ಗಲಭೆಕೋರರು ರಾತ್ರಿಯೆಲ್ಲಾ ದೇಶದ್ರೋಹಿ ಬಾಬರ್ ಫ್ಲೆಕ್ಸ್ ಹಾಕಿದರೆ ಇವರಿಗೆ ಗೊತ್ತಾವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಗಿಗುಡ್ಡ ಗಲಬೆಗೆ ಸಂಬಂಧಿಸಿದಂತೆ ಗೃಹ, ಪೊಲೀಸ್ ಹಾಗೂ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇಲ್ಲಿ ನಡೆಯುತ್ತಿರುವ ಗಲಬೆ ನೋಡಿದರೆ ಶಿವಮೊಗ್ಗ ಮತ್ತೊಂದು ಕಾಶ್ಮೀರವಾಗುತ್ತಿದೆಯಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಗಲಬೆಕೋರರಿಗೆ ಬಿಸ್ಮಿಲ್ಲಾ ಖಾನ್, ಅಬ್ದುಲ್ ಕಲಾಂ, ಶಿಶುನಾಳ ಷರೀಪ್ ಅವರ ಆದರ್ಶ ಬೇಕಿಲ್ಲ. ತಂದೆಯ ತಲೆ ಕಡಿದು ರಾಜ್ಯಬಾರ ನಡೆಸಿದ ದುರುಳ ಬಾಬರ್ ಫ್ಲೆಕ್ಸ್ ಅಳವಡಿಸುತ್ತಾರೆಂದರೆ ಇವರ ಮನಸ್ಥಿತಿ ಎಲ್ಲಿಗೆ ಬಂದಿದೆ ಎಂದು ಯೋಚಿಸಬೇಕಿದೆ ಎಂದರು.